ಕ್ರಿಕೆಟ್

IPL 2024 ಮುಂಬೈ Vs ಹೈದರಾಬಾದ್: ಒಂದೇ ಪಂದ್ಯದಲ್ಲಿ 523 ರನ್, 38 ಸಿಕ್ಸರ್; RCB ರೆಕಾರ್ಡ್ ಸೇರಿ ಹಲವು ದಾಖಲೆ ಧೂಳಿಪಟ!

ಹಾಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮತ್ತೊಂದು ಬೃಹತ್ ಸ್ಕೋರಿಂಗ್ ಪಂದ್ಯ ದಾಖಲಾಗಿದ್ದು, ಈ ಪಂದ್ಯ 11 ವರ್ಷಗಳ ಹಿಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗರಿಷ್ಠ ಮೊತ್ತದ ದಾಖಲೆಯನ್ನೂ ಉಡೀಸ್ ಮಾಡಿದೆ.

ಹೈದರಾಬಾದ್: ಹಾಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮತ್ತೊಂದು ಬೃಹತ್ ಸ್ಕೋರಿಂಗ್ ಪಂದ್ಯ ದಾಖಲಾಗಿದ್ದು, ಈ ಪಂದ್ಯ 11 ವರ್ಷಗಳ ಹಿಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗರಿಷ್ಠ ಮೊತ್ತದ ದಾಖಲೆಯನ್ನೂ ಉಡೀಸ್ ಮಾಡಿದೆ.

ಹೌದು.. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ರನ್ ಹೊಳೆ ಹರಿಯಿತು.

ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್‌ಆರ್‌ಎಚ್ ದಾಖಲೆಯ 277 ರನ್ ಪೇರಿಸಿದರೆ ಗುರಿ ಬೆನ್ನಟ್ಟಿದ ಮುಂಬೈ ದಿಟ್ಟ ಹೋರಾಟ ನೀಡಿತ್ತಲ್ಲದೆ 246 ರನ್ ಗಳಿಸಿತು. ಆದರೂ 31 ರನ್ ಅಂತರದಿಂದ ಸೋಲಿಗೆ ಶರಣಾಯಿತು. ಹೈದರಾಬಾದ್ ಹಾಗೂ ಮುಂಬೈ ನಡುವಣ ಪಂದ್ಯದಲ್ಲಿ ಹಲವು ದಾಖಲೆ ಸೃಷ್ಟಿಯಾದವು.

IPL ಇತಿಹಾಸದಲ್ಲೇ ಗರಿಷ್ಠ ಮೊತ್ತ

ಈ ಪಂದ್ಯದಲ್ಲಿ ಹೈಜರಾಬಾದ್ ತಂಡ ಹೆನ್ರಿಕ್ ಕ್ಲಾಸೆನ್ (80*), ಅಭಿಷೇಕ್ ಶರ್ಮಾ (63) ಹಾಗೂ ಟ್ರಾವಿಸ್ ಹೆಡ್ (62) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ತಂಡ ಮೂರು ವಿಕೆಟ್ ನಷ್ಟಕ್ಕೆ 277 ರನ್ ಪೇರಿಸಿತ್ತು. ಇದು ಐಪಿಎಲ್ ಟೂರ್ನಿಯ ಇತಿಹಾಸದಲ್ಲೇ ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತವಾಗಿದೆ. ಆ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಾಖಲೆಯನ್ನು ಅಳಿಸಿ ಹಾಕಿದೆ. 11 ವರ್ಷಗಳ ಹಿಂದೆ ಆರ್‌ಸಿಬಿ ತಂಡವು 263 ರನ್‌ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

2ನೇ ಇನಿಂಗ್ಸ್ ನಲ್ಲೂ ದಾಖಲೆ

ಇನ್ನು ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ಕೂಡ ಹೈದರಾಬಾದ್ ಗೆ ತಕ್ಕ ಉತ್ತರ ನೀಡಿತು. ಕಠಿಣ ಪೈಪೋಟಿ ನೀಡಿದ ಮುಂಬೈ ಇಂಡಿಯನ್ಸ್, ತಿಲಕ್ ವರ್ಮಾ (64), ಟಿಮ್ ಡೇವಿಡ್ (42*) ಇಶಾನ್ ಕಿಶಾನ್ (34), ನಮನ್ ಧಿರ್ (30) ಹಾಗೂ ರೋಹಿತ್ ಶರ್ಮಾ (26) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿತು. ಐಪಿಎಲ್ ಟೂರ್ನಿಯಲ್ಲಿ ಚೇಸಿಂಗ್ ವೇಳೆ ತಂಡವೊಂದು ಗಳಿಸಿದ ಗರಿಷ್ಠ ಮೊತ್ತ ಇದಾಗಿದೆ. 2020ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಆರು ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಪಂದ್ಯದ ಗರಿಷ್ಠ ರನ್

ಇನ್ನು ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ಒಟ್ಟು 523 ರನ್ ಗಳು ಹರಿದುಬಂದಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ಒಟ್ಟು 500ಕ್ಕೂ ಹೆಚ್ಚು ರನ್‌ ದಾಖಲಾಯಿತು.ಇದು ಪುರುಷ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತವೂ ಹೌದು. ಎಸ್‌ಆರ್‌ಎಚ್ ಹಾಗೂ ಮುಂಬೈ ನಡುವಣ ಪಂದ್ಯದಲ್ಲಿ ದಾಖಲಾದ ಒಟ್ಟು ರನ್ 523.

ಕಳೆದ ವರ್ಷ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ಇಂಡೀಸ್ ನಡುವಣ ಅಂತರರಾಷ್ಟ್ರೀಯ ಪಂದ್ಯದಲ್ಲಿ ಒಟ್ಟು 517 ರನ್ ದಾಖಲಾಗಿತ್ತು. ಇನ್ನು ಐಪಿಎಲ್‌ನಲ್ಲಿ 2010ರಲ್ಲಿ ಚೆನ್ನೈ ಹಾಗೂ ರಾಜಸ್ಥಾನ ನಡುವಣ ಪಂದ್ಯದಲ್ಲಿ ಒಟ್ಟು 469 ರನ್ ದಾಖಲಾಗಿತ್ತು. ಅಂತೆಯೇ ಸನ್​ರೈಸರ್ಸ್ ಹೈದರಾಬಾದ್ ತಂಡವು 277 ರನ್​ ಬಾರಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಮೂರನೇ ಗರಿಷ್ಠ ಸ್ಕೋರ್ ಕಲೆಹಾಕಿದ ವಿಶೇಷ ದಾಖಲೆ ಬರೆದಿದೆ. ಈ ಪಟ್ಟಿಯಲ್ಲಿ ಮಂಗೋಲಿಯಾ ವಿರುದ್ಧ 314 ರನ್ ಬಾರಿಸಿದ ನೇಪಾಳ ತಂಡ ಅಗ್ರಸ್ಥಾನದಲ್ಲಿದೆ.

ಗರಿಷ್ಠ ಸಿಕ್ಸರ್

ಈ ಪಂದ್ಯದಲ್ಲಿ ಎರಡೂ ತಂಡಗಳ ಅಬ್ಬರ ಬ್ಯಾಟಿಂಗ್ ನಡೆಸಿದವು. ಪರಿಣಾಮ ಈ ಒಂದೇ ಪಂದ್ಯದಲ್ಲಿ ಬರೊಬ್ಬರಿ 38 ಸಿಕ್ಸರ್‌ಗಳರು ಹರಿದು ಬಂದಿವೆ. ಈ ಪೈಕಿ ಮುಂಬೈ 20 ಸಿಕ್ಸರ್ ಸಿಡಿಸಿದ್ದರೆ, ಹೈದರಾಬಾದ್ 18 ಸಿಕ್ಸರ್‌ ಗಳನ್ನು ಬಾರಿಸಿತು. ಆ ಮೂಲಕ ಐಪಿಎಲ್ ಸೇರಿದಂತೆ ಟಿ20 ಪಂದ್ಯವೊಂದರಲ್ಲೇ ಅತಿ ಹೆಚ್ಚು ಸಿಕ್ಸರ್ ದಾಖಲಾದ ಪಂದ್ಯ ಇದಾಗಿದೆ.

ಈ ಹಿಂದೆ 2018ರಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ ಐಪಿಎಲ್ ಪಂದ್ಯದಲ್ಲಿ 33 ಸಿಕ್ಸರ್ ಮತ್ತು 2018ರಲ್ಲಿ ಅಫ್ಗನ್ ಪ್ರೀಮಿಯರ್ ಲೀಗ್‌ನಲ್ಲಿ ಬಾಲ್ಕ್ ಲೆಜೆಂಡ್ಸ್ ಹಾಗೂ ಕಾಬೂಲ್ ಜ್ವಾನನ್ ನಡುವಣ ಪಂದ್ಯದಲ್ಲಿ 37 ಸಿಕ್ಸರ್‌ ಗಳು ಹರಿದು ಬಂದಿತ್ತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬರೋಬ್ಬರಿ 20 ಸಿಕ್ಸ್ ಸಿಡಿಸುವ ಮೂಲಕ ಐಪಿಎಲ್​ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ 2ನೇ ತಂಡ ಎನಿಸಿಕೊಂಡಿದೆ.

ಈ ಪಟ್ಟಿಯಲ್ಲಿ 21 ಸಿಕ್ಸರ್ ಸಿಡಿಸಿರುವ ಆರ್​ಸಿಬಿ ಅಗ್ರಸ್ಥಾನದಲ್ಲಿದೆ. ಅಂತೆಯೇ ಈ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡವು 18 ಸಿಕ್ಸ್​ಗಳನ್ನು ಬಾರಿಸಿತ್ತು. ಈ ಮೂಲಕ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ 3ನೇ ತಂಡ ಎನಿಸಿಕೊಂಡಿದೆ.

ಅತಿ ಹೆಚ್ಚು ಬೌಂಡರಿ

ಅಂತೆಯೇ ಈ ಪಂದ್ಯದಲ್ಲಿ 38 ಸಿಕ್ಸರ್ ಗಳ ಜೊತೆಗೇ 31 ಬೌಂಡರಿಗಳ ಕೂಡ ಹರಿದುಬಂದಿದ್ದು, ಆ ಮೂಲಕ ಅತೀ ಹೆಚ್ಚು ಬೌಂಡರಿ (ಸಿಕ್ಸರ್ ಮತ್ತು ಬೌಂಡರಿ ಸೇರಿ)ಗಳು ಹರಿದು ಪಂದ್ಯ ಎಂಬ ಕೀರ್ತಿಗೆ ಈ ಪಂದ್ಯ ಪಾತ್ರವಾಗಿದೆ. ಈ ಹಿಂದೆ 2010ರಲ್ಲಿ ಚೆನ್ನೈ ಹಾಗೂ ರಾಜಸ್ಥಾನ ನಡುವಣ ಪಂದ್ಯದಲ್ಲಿ ಒಟ್ಟು 69 ಬೌಂಡರಿಗಳು (4 ಹಾಗೂ 6 ಸೇರಿದಂತೆ) ದಾಖಲಾಗಿತ್ತು.

ವೇಗದ 200-250 ರನ್​ಗಳ ದಾಖಲೆ

ಐಪಿಎಲ್​ನಲ್ಲಿ ಅತೀ ವೇಗವಾಗಿ 200 ರನ್ ಪೂರೈಸಿದ 2ನೇ ತಂಡ ಎಂಬ ದಾಖಲೆ ಎಸ್​ಆರ್​ಹೆಚ್ ಪಾಲಾಗಿದೆ. ಸನ್​ರೈಸರ್ಸ್ ಹೈದರಾಬಾದ್ ತಂಡವು 14.4 ಓವರ್‌ಗಳಲ್ಲಿ ಈ ದಾಖಲೆ ಬರೆದರೆ, ಆರ್​ಸಿಬಿ 14.1 ಓವರ್​ಗಳಲ್ಲಿ ಈ ಸಾಧನೆ ಮಾಡಿತ್ತು. ಅಂತೆಯೇ ಐಪಿಎಲ್ ಇತಿಹಾಸದಲ್ಲಿ ಅತೀ ವೇಗವಾಗಿ 250 ರನ್ ಕಲೆಹಾಕಿದ ಆರ್​ಸಿಬಿ ತಂಡದ ದಾಖಲೆಯನ್ನು ಎಸ್​ಆರ್​ಹೆಚ್ ತಂಡ ಸರಿಗಟ್ಟಿದೆ.

ದಾಖಲೆ ಪತನ: RCB ಪ್ರತಿಕ್ರಿಯೆ

ಇನ್ನು ತನ್ನ ಗರಿಷ್ಠ ಮೊತ್ತದ ದಾಖಲೆಯನ್ನು ಹೈದರಾಬಾದ್ ಮುರಿದಿದ್ದಕ್ಕೆ ಆರ್ ಸಿಬಿ ಕೂಡ ಪ್ರತಿಕ್ರಿಯೆ ನೀಡಿದ್ದು, ಹೈದರಾಬಾದ್ ತಂಡಕ್ಕೆ ಶುಭ ಕೋರಿದೆ. ಈ ಕುರಿತು ಟ್ವೀಟ್ ಮಾಡಿರುವ ಆರ್ ಸಿಬಿ, ನಮ್ಮ ತಲೆ ತಿರುಗುತ್ತಿದೆ. ಕ್ಲಾಸ್ ಇನ್ನಿಂಗ್ಸ್.. ಹೊಸ ದಾಖಲೆ ನಿರ್ಮಿಸಿದ್ದಕ್ಕೆ ಹೈದರಾಬಾದ್ ತಂಡಕ್ಕೆ ಶುಭಾಶಯಗಳು ಎಂದು ಆರ್ ಸಿಬಿ ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BBMPಯಲ್ಲಿ ಭ್ರಷ್ಟಾಚಾರ: ನಾಗಮೋಹನ ದಾಸ್ ಆಯೋಗದಿಂದ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

ಛಲ ಬಿಡದ ಪ್ರಯತ್ನಕ್ಕೆ ಫಲ: 216 ಗಂಟೆ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ಬರೆದ ಉಡುಪಿಯ ದೀಕ್ಷಾ!

ಕ್ವಾಡ್ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವ ಯೋಜನೆ ಕೈ ಬಿಟ್ಟ ಟ್ರಂಪ್‌; ನ್ಯೂಯಾರ್ಕ್ ಟೈಮ್ಸ್ ವರದಿ

ಬಿಹಾರದಲ್ಲಿ ಆರಂಭವಾದ 'Voter Adhikar Yatra' ದೇಶಾದ್ಯಂತ ವಿಸ್ತರಿಸಲಿದೆ: ರಾಹುಲ್ ಗಾಂಧಿ

ರಾಜ್ಯದ ಜನತೆಗ ಮತ್ತೊಂದು ಶಾಕ್: ಆಸ್ತಿ ನೋಂದಣಿ ಶುಲ್ಕ ಹೆಚ್ಚಳ; ನಾಳೆಯಿಂದಲೇ ಜಾರಿ

SCROLL FOR NEXT