ಗೌತಮ್ ಗಂಭೀರ್ - ವಿರಾಟ್ ಕೊಹ್ಲಿ
ಗೌತಮ್ ಗಂಭೀರ್ - ವಿರಾಟ್ ಕೊಹ್ಲಿ 
ಕ್ರಿಕೆಟ್

IPL 2024, KKR vs RCB: ದಶಕಗಳ ಮುನಿಸಿಗೆ ತೆರೆ ಎಳೆದ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್

Ramyashree GN

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಹಣಾಹಣಿಯು ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದೆ. ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಬ್ಬರನ್ನೊಬ್ಬರು ಅಪ್ಪಿಕೊಂಡು ಎಲ್ಲವೂ ಸರಿಯಿದೆ ಎನ್ನುವ ಸಂದೇಶ ರವಾನಿಸಿದರು.

ಶುಕ್ರವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರ ಕೊಹ್ಲಿ ಐಪಿಎಲ್‌ನಲ್ಲಿ ತಮ್ಮ 52ನೇ ಅರ್ಧಶತಕ ಸಿಡಿಸಿದ್ದಾರೆ. 59 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಸಿಡಿಸುವ ಮೂಲಕ ಅಜೇಯ 83 ರನ್ ಗಳಿಸಿದರು.

ಈ ಪಂದ್ಯದ ವೇಳೆ ಮೈದಾನಕ್ಕೆ ಬಂದ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಅವರಿಗೆ ಹಸ್ತಲಾಘವ ಮಾಡಿದರು. ಅಲ್ಲದೆ, ಪರಸ್ಪರ ಅಪ್ಪಿಕೊಂಡು ಉಭಯ ಕುಶಲೋಪರಿ ವಿಚಾರಿಸಿದರು. ಈ ಮೂಲಕ ಕಳೆದ ಋತುವಿನಿಂದ ತಮ್ಮ ನಡುವೆ ಉಂಟಾಗಿದ್ದ ಮನಸ್ತಾಪವನ್ನು ಬಗೆಹರಿಸಿಕೊಂಡಿದ್ದಾರೆ.

ಐಪಿಎಲ್ 2023 ರಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಲೀಗ್ ಹಂತದ ಪಂದ್ಯದ ವೇಳೆ, ಕೊಹ್ಲಿ ಮತ್ತು ಗಂಭೀರ್ ನಡುವೆ ಪಿಚ್‌ನಲ್ಲಿ ತೀವ್ರ ವಾಗ್ವಾದ ನಡೆದಿತ್ತು. ಇದುವೇ ಕೊಹ್ಲಿ ಮತ್ತು ಗಂಭೀರ್ ನಡುವಿನ ಮೊದಲ ಘರ್ಷಣೆಯಾಗಿರಲಿಲ್ಲ. 2013 ರಲ್ಲಿ ಗಂಭೀರ್ ಕೋಲ್ಕತ್ತಾ ತಂಡದ ನಾಯಕರಾಗಿದ್ದಾಗ ಮತ್ತು ಕೊಹ್ಲಿ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದಾಗಲೇ ಒಬ್ಬರನ್ನೊಬ್ಬರು ತಳ್ಳಿಕೊಂಡು ತೀವ್ರ ವಾಗ್ವಾದ ನಡೆಸಿದ್ದರು.

2023ರಲ್ಲಿ ಲಕ್ನೋ ಪರ ಆಡುತ್ತಿದ್ದ ಅಫ್ಘಾನಿಸ್ತಾನದ ವೇಗಿ ನವೀನ್-ಉಲ್-ಹಕ್ ಮತ್ತು ಕೊಹ್ಲಿ ನಡುವೆ ಮೈದಾನದಲ್ಲಿಯೇ ವಾಗ್ವಾದ ಉಂಟಾಗಿತ್ತು. ಈ ವೇಳೆ ಗಂಭೀರ್ ತಮ್ಮ ಆಟಗಾರರನ್ನು ಕೊಹ್ಲಿಯೊಂದಿಗೆ ಮಾತನಾಡದಂತೆ ತಡೆದರು ಮತ್ತು ಕೊಹ್ಲಿಯೊಂದಿಗೆ ಘರ್ಷಣೆಗಿಳಿದಿದ್ದರು.

SCROLL FOR NEXT