ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ 2024 ಟೂರ್ನಿಯ 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್ ಗಳಿಂದ ರಾಯಲ್ ಚಾಲೆಂಜರ್ಸ್ ತಂಡ ಗೆಲುವು ಸಾಧಿಸಿತು. ಈ ಮೂಲಕ ಆರ್ ಸಿಬಿ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಆರಂಭಿಕ ಆಟಗಾರರಾದ ಫಾಪ್ ಡು ಪ್ಲೆಸಿಸ್ 6, ವಿರಾಟ್ ಕೊಹ್ಲಿ 27, ರನ್ ಗಳಿಗೆ ಔಟಾಗುವ ಮೂಲಕ ಆರಂಭದಲ್ಲಿ ಅಭಿಮಾನಿಗಳಿಗೆ ಆಘಾತ ಮೂಡಿಸಿದರು. ನಂತರ ಜೊತೆಯಾದ ವಿಲ್ ಜಾಕ್ಸ್ 41, ರಜತ್ ಪಾಟಿದಾರ್ 52, ಕ್ಯಾಮರೂನ್ ಗ್ರೀನ್ ಅಜೇಯ 32 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 160 ರ ಗಡಿ ದಾಟಿಸಿದರು. ಉಳಿದಂತೆ ಮಹಿಪಾಲ್ 13, ಕರಣ್ ಶರ್ಮಾ 6 ರನ್ ಗಳಿಸಿದರು. ಆದರೆ, ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಉಂಟುಮಾಡಿದರು.
ಆರ್ ಸಿಬಿ ನೀಡಿದ 188 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್ ಗಳಲ್ಲಿ 140 ರನ್ ಗಳಿಗೆ ಆಲೌಟ್ ಆಗುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನಲ್ಲಿ ಗೆಲುವಿನ ನಗೆ ಬೀರಿತು. ಆರ್ ಸಿಬಿ ಪರ ಯಶ್ ದಯಾಳ್ 3 ವಿಕೆಟ್ ಪಡೆದರೆ ಮೊಹಮ್ಮದ್ ಸಿರಾಜ್, ಸ್ವಪ್ನಿಲ್ ಸಿಂಗ್, ಕ್ಯಾಮರೂನ್ ಗ್ರೀನ್ 1, ಲೂಕಿಸ್ ಫಾರ್ಗ್ಯೂಸನ್ 2 ವಿಕೆಟ್ ಪಡೆದರು. ಆರ್ ಸಿಬಿ ಪರ ಅಜೇಯ 32 ರನ್ ಹಾಗೂ ಒಂದು ವಿಕೆಟ್ ಪಡೆದ ಕ್ಯಾಮರೂನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಆರ್ ಸಿಬಿ ಪ್ಲೇ ಆಪ್ ಕನಸು ಇನ್ನೂ ಜೀವಂತವಾಗಿದೆ.