ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವೇಗಿ ಇಶಾಂತ್ ಶರ್ಮಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರನ್ನೇ ಕೆಣಕಿ, ಆಗಬಹುದಾಗಿದ್ದ ದೊಡ್ಡ ಜಗಳದಿಂದ ಕೊಂಚದರಲ್ಲೇ ಪಾರಾಗಿದ್ದಾರೆ.
ಹೌದು.. ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 187 ರನ್ ಸಿಡಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.1 ಓವರ್‌ಗೆ 10 ವಿಕೆಟ್ ನಷ್ಟಕ್ಕೆ 140 ರನ್ ಗಳಿಸುವ ಮೂಲಕ 47 ರನ್‌ಗಳ ಸೋಲನ್ನಪ್ಪಿತು.
ಈ ನಡುವೆ ಆರ್ ಸಿಬಿ ಬ್ಯಾಟಿಂಗ್ ವೇಳೆ ಡೆಲ್ಲಿ ವೇಗಿ ಇಶಾಂತ್ ಶರ್ಮಾ ಆರ್ ಸಿಬಿಯ ವಿರಾಟ್ ಕೊಹ್ಲಿಯನ್ನು ಕೆಣಕಿದ್ದರು. ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ಅವರು ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದರು.
4ನೇ ಓವರ್ನ ಇಶಾಂತ್ ಬೌಲಿಂಗ್ನಲ್ಲಿ ಆಫ್ ಸ್ಟಂಪ್ ನಿಂದ ಹೊರಗೆ ಹೋಗುತ್ತಿದ್ದ ಚೆಂಡನ್ನು ಟಚ್ ಮಾಡಲು ಹೋಗಿ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ಗೆ ಸುಲಭವಾಗಿ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಬೇಕಾಯಿತು. ಇಶಾಂತ್ ಇದೇ ಮೊದಲ ಬಾರಿಗೆ ಟಿ20ಯಲ್ಲಿ ವಿರಾಟ್ ಅವರನ್ನು ಔಟ್ ಮಾಡಿದರು.
ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ನಂತರ ಇಶಾಂತ್ ಶರ್ಮಾ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ವಿರಾಟ್ ಬಳಿ ಬಂದು ಅವರನ್ನು ತಳ್ಳಿದರು.
ಇಶಾಂತ್ ಮತ್ತು ಕೊಹ್ಲಿ ಸ್ನೇಹಿತರಾದ್ದರಿಂದ ಕೊಹ್ಲಿ ಇದನ್ನು ಗಂಭೀರವಾಗಿ ಪರಿಗಣಿಸದೇ ತಮಾಷೆಯಾಗಿ ತೆಗೆದುಕೊಂಡರು. ಒಂದು ವೇಳೆ ಇದೇ ಜಾಗದಲ್ಲಿ ಬೇರೆ ಆಟಗಾರದಿದ್ದರೆ ಅದರ ಕಥೆಯೇ ಬೇರೆ ಆಗಿರುತ್ತಿತ್ತು. ಅಲ್ಲಿ ದೊಡ್ಡ ಜಗಳವೇ ನಡೆಯುತ್ತಿತ್ತು. ಆದರೆ ಕೊಹ್ಲಿ ಇಶಾಂತ್ ತಳ್ಳಿದ ನಂತರವೂ ಕೆಳಗೆ ನೋಡುತ್ತಾ ನಗುತ್ತಾ ಪೆವಿಲಿಯನ್‌ಗೆ ಮರಳಿದರು.
ಪಂದ್ಯದುದ್ದಕ್ಕೂ ಇವರಿಬ್ಬರ ನಡುವಣ ತಮಾಷೆ ನಡೆಯುತ್ತಲೇ ಇತ್ತು. ಇಶಾಂತ್ ಬ್ಯಾಟಿಂಗ್ಗೆ ಬಂದಾಗ ಫೀಲ್ಡ್ನಲ್ಲಿದ್ದ ಕೊಹ್ಲಿ ತಮಾಷೆ ಮಾಡುತ್ತಿರುವುದು ಕಂಡುಬಂತು. ಡೆಲ್ಲಿ ಬ್ಯಾಟಿಂಗ್ ವೇಳೆಯೂ ಇಶಾಂತ್ ಶರ್ಮಾ ಬ್ಯಾಟಿಂಗ್ ಗೆ ಬಂದಾಗ ಕೊಹ್ಲಿ ಇಶಾಂತ್ ಶರ್ಮಾರನ್ನು ಕೆಣಕುತ್ತಿದ್ದರು. ಇಬ್ಬರೂ ನಗುತ್ತಾ ಮಾತನಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಅಂದಹಾಗೆ ವಿರಾಟ್ ಕೊಹ್ಲಿ (Virat Kohli) ಮತ್ತು ಇಶಾಂತ್ ಶರ್ಮಾ ಅತ್ಯುತ್ತಮ ಸ್ನೇಹಿತರು. ಇಬ್ಬರೂ ದೆಹಲಿ ಪರ ಬಾಲ್ಯದಿಂದಲೂ ಒಟ್ಟಿಗೆ ದೇಶೀಯ ಕ್ರಿಕೆಟ್ ಆಡುತ್ತಾ ಬೆಳೆದವರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಇಶಾಂತ್ ಶರ್ಮಾ ಅವರೇ ಹೇಳಿದ್ದರು. ವಿರಾಟ್ ಹಾಗೂ ಇಶಾಂತ್ ಈಗಲೂ ಉತ್ತಮ ಸ್ನೇಹಿತರಾಗಿದ್ದಾರೆ.