ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿಯ ಪ್ಲೇಆಫ್ಸ್ ಕದನ ಕೂಡ ತೀವ್ರ ಕುತೂಹಲೆ ಕೆರಳಿಸಿದ್ದು, ಈ ಟೂರ್ನಿಯ ನಿರ್ಣಾಯಕ ಹಂತದಲ್ಲಿ ಮಳೆ ಕಾಟ ಐಪಿಎಲ್ ತಂಡಗಳು ತತ್ತರಿಸುವಂತೆ ಮಾಡಿದೆ.
ನಿನ್ನೆಯಷ್ಟೇ ಪ್ಲೇ ಆಫ್ ಮೇಲೆ ಕಣ್ಣಿಟ್ಟಿದ್ದ ಗುಜರಾತ್ ಟೈಟನ್ಸ್ ಇದೇ ಮಳೆಯಿಂದಾಗಿ ಇದೀಗ ಟೂರ್ನಿಯಿಂದಲೇ ಔಟಾಗಿದೆ. ಮಳೆಯಿಂದಾಗಿ ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತಾ ನಡುವಿನ ಪಂದ್ಯ ಒಂದೂ ಎಸೆತವನ್ನೂ ಕಾಣದೇ ಸ್ಥಗಿತವಾಗಿದ್ದು, ಇದರೊಂದಿಗೆ ಅಂಪೈರ್‌ಗಳು ಉಭಯ ತಂಡಗಳಿಗೂ ತಲಾ ಒಂದೊಂದು ಪಾಯಿಂಟ್ ನೀಡದರು.
19 ಅಂಕಗಳೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡರೆ, 11 ಅಂಕಗಳೊಂದಿಗೆ ಗುಜರಾತ್ ಟೈಟಾನ್ಸ್ ತಂಡ ಟೂರ್ನಿಯಿಂದ ಹೊರಬಿತ್ತು. ಈ ಪಂದ್ಯವನ್ನುಗೆದ್ದಿದ್ದರೆ ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್ ಕನಸು ಜೀವಂತವಾಗಿರುತ್ತಿತ್ತು. ಆದರೆ ಮಳೆರಾಯ ಗುಜರಾತ್ ಕನಸಿಗೆ ತಣ್ಣೀರೆರಚಿದ್ದಾನೆ. ಪರಿಣಾಮ ಗುಜರಾತ್ ಟೈಟಾನ್ಸ್ ತಂಡ ಟೂರ್ನಿಯಿಂದಲೇ ಹೊರದಬ್ಬಲ್ಪಟ್ಟಿದೆ.
RCB ಪ್ಲೇ ಆಫ್ ಕನಸಿಗೂ ಮಳೆ ಕರಿನೆರಳು
ಗುಜರಾತ್ ಮಾತ್ರವಲ್ಲದೇ ಇದೀಗ ಆರ್ ಸಿಬಿ ಕನಸಿನ ಮೇಲೂ ಮಳೆ ಕರಿನೆರಳು ಬೀರಿದೆ. ಗುಜರಾತ್ ಟೈಟಾನ್ಸ್ ತಂಡವನ್ನು ಮನೆಗೆ ಕಳುಹಿಸಿದ ಮಳೆ.. ಇದೀಗ ಆರ್ ಸಿಬಿ ವರ್ಸಸ್ ಸಿಎಸ್ ಕೆ ಪಂದ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆರ್‌ಸಿಬಿ ಮತ್ತು ಸಿಎಸ್‌ಕೆ ಪ್ಲೇ ಆಫ್ ತಲುಪಬೇಕಾದರೆ ಈ ಪಂದ್ಯವನ್ನು ಗೆಲ್ಲುವುದು ಬಹಳ ಮುಖ್ಯ. ಹೀಗಾಗಿ ಉಭಯ ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಈ ಪಂದ್ಯ ಮೇ 18 ಅಂದರೆ ಶನಿವಾರ ಬೆಂಗಳೂರಿನಲ್ಲಿ ನಡೆಯಲಿದ್ದು, ಅಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್‌ಸಿಬಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಋತುವಿನ ಮೊದಲಾರ್ಧದಲ್ಲಿ ದಯನೀಯವಾಗಿ ವಿಫಲವಾದ RCB ದ್ವಿತೀಯಾರ್ಧದಲ್ಲಿ ಅಸಾಧಾರಣವಾಗಿ ಚೇತರಿಸಿಕೊಂಡು ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಸತತ 5 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಅವಕಾಶಗಳನ್ನು ಜೀವಂತವಾಗಿರಿಸಿಕೊಂಡಿದೆ.
ಮಳೆ ಬಂದರೆ ಏನು ಗತಿ?
RCB ಪ್ರಸ್ತುತ 0.387 ರನ್ ರೇಟ್‌ನೊಂದಿಗೆ ಐದನೇ ಸ್ಥಾನದಲ್ಲಿದ್ದು, RCB ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 18 ಕ್ಕೂ ಹೆಚ್ಚು ರನ್‌ಗಳಿಂದ ಸೋಲಿಸಬೇಕು. ಅಥವಾ ಸಿಎಸ್ ಕೆ ವಿರುದ್ಧ 18.1 ಓವರ್ ಗಳಲ್ಲಿ ಗುರಿ ಮುಟ್ಟಬೇಕು. ಆಗ ಮಾತ್ರ ಸಿಎಸ್ ಕೆಗಿಂತ ಉತ್ತಮ ರನ್ ರೇಟ್ ಪಡೆದು ಪ್ಲೇ ಆಫ್ ಗೆ ಅರ್ಹತೆ ಪಡೆಯಲಿದೆ. ಅಲ್ಲದೆ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನು ಸೋಲಬೇಕಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ಕೊನೆಯ ಎರಡು ಪಂದ್ಯಗಳಲ್ಲಿ ಸೋತರೆ, ಆರ್‌ಸಿಬಿ ಮತ್ತು ಸಿಎಸ್‌ಕೆ ಪ್ಲೇ ಆಫ್‌ಗೆ ಸೇರುತ್ತವೆ. ಮಳೆಯಿಂದಾಗಿ ಪಂದ್ಯ ರದ್ದಾದರೆ ಆರ್‌ಸಿಬಿಗೆ ಪ್ಲೇ ಆಫ್ ಅವಕಾಶ ಕೈ ತಪ್ಪಲಿದೆ. ತಂಡ 13 ಅಂಕಗಳೊಂದಿಗೆ ಟೂರ್ನಿಯಿಂದ ನಿರ್ಗಮಿಸುತ್ತಿದೆ. ಮತ್ತೊಂದೆಡೆ, ಸಿಎಸ್‌ಕೆ ಪ್ಲೇ ಆಫ್ ಗೆ ಸನ್‌ರೈಸರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.