ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಬಿಸಿಸಿಐ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರನ್ನು ಒಂದು ಪಂದ್ಯದಿಂದ ಅಮಾನತು ಮಾಡಿತ್ತು. ಮೂರನೇ ಬಾರಿಗೆ ಸ್ಲೋ ಓವರ್ ರೇಟ್ ಅಪರಾಧಕ್ಕಾಗಿ ಪಂತ್ ಅವರು ಒಂದು ಪಂದ್ಯದಿಂದ ಅಮಾನತುಗೊಂಡ ನಂತರ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಿಂದ ಹೊರಗುಳಿಯಬೇಕಾಯಿತು.
ಪಂತ್ ಅನುಪಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಆಡಿದ್ದ ಡೆಲ್ಲಿ ತಂಡ ಸೋಲು ಕಾಣುವಂತಾಯಿತು. ಇದು ಐಪಿಎಲ್ ಪ್ಲೇಆಫ್ ರೇಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ತೀವ್ರ ಹಿನ್ನಡೆ ಉಂಟುಮಾಡಿತು. ಒಂದು ವೇಳೆ ತಾವು ಆ ಪಂದ್ಯದಲ್ಲಿ ಆಡಿದ್ದರೆ ಆರ್‌ಸಿಬಿ ಎದುರಿನ ನಿರ್ಣಾಯಕ ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶವಿತ್ತು ಎಂದು ರಿಷಬ್ ಪಂತ್ ಬಿಸಿಸಿಐ ವಿರುದ್ಧ ಮುಸುಕಿನ ದಾಳಿ ನಡೆಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು 47 ರನ್‌ಗಳ ಅಂತರದಿಂದ ಸೋಲು ಕಂಡಿದ್ದು, ಅದರ ನೆಟ್ ರನ್ ರೇಟ್ ಮೇಲೆ ಪರಿಣಾಮ ಬೀರಿದೆ. ಇದೀಗ ಡೆಲ್ಲಿ ತಂಡವು ಪ್ಲೇ ಆಫ್‌ಗೆ ಅರ್ಹತೆ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಇತರ ತಂಡಗಳು ತಮ್ಮ ಪಂದ್ಯಗಳನ್ನು ಆಡುವವರೆಗೆ ಕಾಯ್ದು ನೋಡಬೇಕಾಗಿದೆ.
'ನಾನು ಆಡಿದ್ದರೆ ನಾವು ಖಂಡಿತವಾಗಿ ಪಂದ್ಯವನ್ನು ಗೆಲ್ಲುತ್ತಿದ್ದೆವು ಎಂದು ನಾನು ಹೇಳುವುದಿಲ್ಲ. ಆದರೆ, ಕೊನೆಯ ಪಂದ್ಯದಲ್ಲಿ ಆಡುವ ಅವಕಾಶ ನನಗೆ ಸಿಕ್ಕಿದ್ದರೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ನಮಗೆ ಉತ್ತಮ ಅವಕಾಶವಿತ್ತು' ಎಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 19 ರನ್‌ಗಳ ಜಯದ ನಂತರ ಪಂತ್ ಹೇಳಿದರು.
ಈ ಆವೃತ್ತಿಯ ಆರಂಭದಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ತೋರದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆವೃತ್ತಿಯ ಅಂತ್ಯದ ವೇಳೆಗೆ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿತ್ತು. ಈ ಮೂಲಕ ನಾಕೌಟ್‌ಗಳಿಗೆ ಪ್ರವೇಶಿಸುವ ಅವಕಾಶಗಳನ್ನು ಹಸಿರಾಗಿಟ್ಟುಕೊಂಡು ಮುಂದುವರಿಯಿತು. ಅನುಭವಿ ವೇಗಿಗಳಾದ ಇಶಾಂತ್ ಶರ್ಮಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್ ಮತ್ತು ಆರಂಭಿಕರಾದ ಡೇವಿಡ್ ವಾರ್ನರ್ ಅವರ ಗಾಯಗಳಿಂದಾಗಿ ತಂಡಕ್ಕೆ ಕೊಂಚ ಹಿನ್ನಡೆಯಾಗಿತ್ತು.
'ನಾವು ಬಹಳಷ್ಟು ಭರವಸೆಯೊಂದಿಗೆ ಆ ಆವೃತ್ತಿಯನ್ನು ಪ್ರಾರಂಭಿಸಿದ್ದೇವೆ. ಆದರೆ, ಗಾಯಗಳು ಮತ್ತು ಏರಿಳಿತಗಳು ಇದ್ದವು. ಆದರೆ ಫ್ರಾಂಚೈಸಿಯಾಗಿ, ನೀವು ಎಲ್ಲ ಸಮಯದಲ್ಲೂ ದೂರನ್ನು ಹೇಳಲು ಸಾಧ್ಯವಿಲ್ಲ; ನಿಮ್ಮಲ್ಲಿರುವದನ್ನು ನೀವು ಸಮರ್ಪಕವಾಗಿ ಬಳಸಿಕೊಳ್ಳಬೇಕು... ಕೆಲವು ನೀವು ನಿಯಂತ್ರಿಸಬಹುದಾದ ವಿಷಯಗಳು ಇರುತ್ತವೆ, ಅಲ್ಲದೆ, ಆದರೆ ನಿಯಂತ್ರಿಸಲು ಸಾಧ್ಯವಾಗದ ಕೆಲವು ವಿಷಯಗಳು ಇರುತ್ತವೆ' ಎಂದರು.
ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ಮಾತನಾಡಿ, ಈ ಆವೃತ್ತಿಯ ಉದ್ದಕ್ಕೂ ಪವರ್‌ಪ್ಲೇಯಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುವುದು ಎಲ್‌ಎಸ್‌ಜಿಗೆ ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೋಲಸ್ ಪೂರನ್‌ರಂತಹ ದೊಡ್ಡ-ಹಿಟ್ಟರ್‌ಗಳನ್ನು ಬಳಸಿಕೊಳ್ಳುವುದನ್ನು ತಡೆಯಿತು ಎಂದು ಹೇಳಿದರು.
ಈ ಆವೃತ್ತಿಯ ಉದ್ದಕ್ಕೂ ಇದು ಸಮಸ್ಯೆಯಾಗಿದೆ. ನಾವು ಪವರ್‌ಪ್ಲೇಯಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇದ್ದೇವೆ. ಸ್ಟೊಯಿನಿಸ್ ಮತ್ತು ಪೂರನ್ ಅವರಂತಹ ಆಟಗಾರರನ್ನು ಉತ್ತಮವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದುವೇ ನಾವು ಈ ಸ್ಥಾನದಲ್ಲಿರಲು ದೊಡ್ಡ ಕಾರಣವಾಗಿದೆ ಎಂದು ಅವರು ಹೇಳಿದರು.