ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಈಗಾಗಲೇ ಕೋಲ್ಕತಾ, ರಾಜಸ್ಥಾನ ಮತ್ತು ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇಆಫ್ ಗೆ ಅರ್ಹತೆ ಪಡೆದಿದ್ದು, ಉಳಿದಿರುವ ಒಂದು ಸ್ಥಾನಕ್ಕಾಗಿ ನಾಳೆ RCB ಮತ್ತು CSK ತಂಡಗಳ ನಡುವೆ ಜಿದ್ದಾಜಿದ್ದಿನ ಹಣಾಹಣಿ ನಡೆಯಲಿದೆ.
ಇಡೀ ಟೂರ್ನಿಯ ಪಂದ್ಯಗಳು ಒಂದು ಲೆಕ್ಕದ್ದಾದರೆ, ನಾಳೆ ನಡೆಯುವ ಪಂದ್ಯ ಮತ್ತೊಂದು ತೂಕ ಹೊಂದಿದೆ. ಒಂದು ಅರ್ಥದಲ್ಲಿ ಹೇಳಬೇಕಾದರೆ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಪಂದ್ಯಕ್ಕೆ ಕ್ರಿಯೇಟ್ ಆಗುವಷ್ಟೇ ಹೈಪ್ ನಾಳಿನ ಆರ್ ಸಿಹಿ ಮತ್ತು ಸಿಎಸ್ ಕೆ ಪಂದ್ಯಕ್ಕೂ ಕ್ರಿಯೇಟ್ ಆಗಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯೋ ಹೈವೋಲ್ಟೆಜ್ ಕದನವನ್ನ ಕಣ್ತುಂಬಿಕೊಳ್ಳಲು, ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಟಿಕೆಟ್ಗಂತೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಬೆಲೆ ಗಗನಕ್ಕೇರಿದೆ.
ಮೆ18ರ ಮಹಾ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಸಿಎಸ್ಕೆ – ಅರ್ಸಿಬಿ ರಣರೋಚಕ ಕಾದಾಟಕ್ಕೆ, ಚಿನ್ನಸ್ವಾಮಿ ಮೈದಾನದಲ್ಲಿ ವೇದಿಕೆ ಸಿದ್ಧವಾಗಿದೆ. ಪ್ಲೇ ಆಫ್ಗೆ ಎಂಟ್ರಿ ಕೊಡುತ್ತೋ? ಇಲ್ವೋ? ಕಪ್ ಗೆಲ್ಲುತ್ತೋ? ಇಲ್ವೋ?. ಆದ್ರೆ, ಚೆನ್ನೈ ವಿರುದ್ಧ ಗೆಲ್ಲಲೇಬೇಕು ಅನ್ನೋದು, ಸದ್ಯ ಆರ್ಸಿಬಿ ಫ್ಯಾನ್ಸ್ ಮನದ ಮಾತಾಗಿದೆ. ಇನ್ನೊಂದೆಡೆ, ಚೆನ್ನೈ ಗೆದ್ದು ಪ್ಲೇ ಆಫ್ಗೆ ಎಂಟ್ರಿ ಕೊಡಲಿ ಅಂತಾ, ಸಿಎಸ್ಕೆ ಅಭಿಮಾನಿಗಳ ಪ್ರಾರ್ಥನೆ ಜೋರಾಗಿದೆ.
ಧೋನಿಗೆ ಕೊನೆಯ ಪಂದ್ಯ, ನಿವೃತ್ತಿ?
ಇದಕ್ಕೆ ಸಾಕಷ್ಟು ಕಾರಣಗಳಿದ್ದು, ನಾಳಿನ ಪಂದ್ಯವನ್ನು ಚೆನ್ನೈ ಸೋತರೆ ಅದುವೇ ತಂಡದ ಸ್ಟಾರ್ ಆಟಗಾರ ಎಂಎಸ್ ಧೋನಿಯ ಕೊನೆಯ ಪಂದ್ಯವಾಗಿರಲಿದೆ ಎಂದು ಹೇಳಲಾಗುತ್ತಿದೆ. ಕಾರಣ ನಾಳಿನ ಪಂದ್ಯವನ್ನು ಚೆನ್ನೈ ಸೋತರೆ ಧೋನಿ ಐಪಿಎಲ್ ಗೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಶತಾಯಗತಾಯ ನಾಳಿನ ಪಂದ್ಯ ಕಣ್ತುಂಬಿಕೊಳ್ಳಲು ಚೆನ್ನೈ ಅಭಿಮಾನಿಗಳು ಚಿನ್ನಸ್ವಾಮಿಗೆ ಧಾವಿಸುವ ಸಾಧ್ಯತೆ ಇದೆ.
ಆರ್ ಸಿಬಿಗೆ ಪ್ಲೇಆಫ್ ಕನಸು
ಇನ್ನು ಟೂರ್ನಿಯ ಆರಂಭಿಕ ಹಂತದಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಆರ್ ಸಿಬಿ ಬಳಿಕ ಫೀನಿಕ್ಸ್ ನಂತೆ ಎದ್ದು ಬಂದಿದ್ದು, ಸತತ 6 ಪಂದ್ಯಗಳ ಭರ್ಜರಿ ಜಯದ ಮೂಲಕ ಟೂರ್ನಿಯಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ನಾಳಿನ ಪಂದ್ಯವನ್ನು ಉತ್ತಮ ರನ್ ರೇಟ್ ನೊಂದಿಗೆ ಗೆದ್ದರೆ ಆರ್ ಸಿಬಿ ಪ್ಲೇ ಆಫ್ ಕನಸು ನನಸಾಗುತ್ತದೆ.
ಬೆಂಗಳೂರಲ್ಲಿ ಧೋನಿಯ ಕೊನೆಯ ಪಂದ್ಯ
42 ವರ್ಷದ ಧೋನಿಗೆ ಬಹುತೇಕ ಇದೇ ಕೊನೆಯ ಐಪಿಎಲ್. ಬೆಂಗಳೂರಿನಲ್ಲೂ ಧೋನಿ ಆಡೋ ಕೊನೆ ಪಂದ್ಯ ಇದಾಗಲಿದೆ. ಆರ್ಸಿಬಿ ಫ್ಯಾನ್ಸ್ಗೆ ಕೊಹ್ಲಿನೇ ಕಿಂಗ್.! ಚೆನ್ನೈ ಫ್ಯಾನ್ಸ್ಗೆ ತಲಾ ಧೋನಿಯೇ ದಾದಾ, ''ತಲಾ''. ಹೀಗಾಗಿ, ಇವರಿಬ್ಬರ ಮುಖಾಮುಖಿ ಈ ಪಂದ್ಯದ ಕ್ರೇಜ್ ಹೆಚ್ಚಿಸಿದೆ.
ಟಿಕೆಟ್ ಭಾರಿ ಡಿಮ್ಯಾಂಡ್; ಬ್ಲಾಕ್ ಮಾರ್ಕೆಟ್ ನಲ್ಲಿ ದುಬಾರಿ ಬೆಲೆ!
ಇಷ್ಟೆಲ್ಲಾ ಕಾರಣಕ್ಕೆ ನಾಳಿನ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಈ ಮಹತ್ವದ ಪಂದ್ಯ ವೀಕ್ಷಿಸಲು ತಮಿಳುನಾಡಿನಿಂದ ಬೆಂಗಳೂರಿಗೆ ಸಿಎಸ್ಕೆ ಫ್ಯಾನ್ಸ್ ದೌಡಾಯಿಸ್ತಿದ್ರೆ, ಕರ್ನಾಟಕದ ಮೂಲೆ ಮೂಲೆಗಳಲ್ಲಿರೋ ಆರ್ಸಿಬಿ ಫ್ಯಾನ್ಸ್, ಬೆಂಗಳೂರಿಗೆ ಬರ್ತಿದ್ದಾರೆ. ಪರಿಣಾಮ ಪಂದ್ಯದ ಟಿಕೆಟ್ ರೇಟ್ ದುಪ್ಪಟ್ಟಾಗಿದೆ. ಟಿಕೆಟ್ ರೇಟ್ ಗಗನಕ್ಕೇರಿದ್ರೂ ಕ್ಯಾರೆ ಅನ್ನದ ಫ್ಯಾನ್ಸ್, ಬ್ಲ್ಯಾಕ್ ಮಾರ್ಕೆಟ್ನಲ್ಲಿ ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದಾರೆ.
ಮೂಲಗಳ ಪ್ರಕಾರ 1250 ಬೆಲೆಯ ಟಿಕೆಟ್ ಇದೀಗ 8000ಕ್ಕೆ ಮಾರಟವಾಗ್ತಿದ್ರೆ, 3,500 ಮೂಲಬೆಲೆಯ ಟಿಕೆಟ್ 15 ಸಾವಿರಕ್ಕೆ, 7 ಸಾವಿರ ರೂಗಳ ಟಿಕೆಟ್ 20 ಸಾವಿರಕ್ಕೆ, 10 ಸಾವಿರದ ಟಿಕೆಟ್ 30 ಸಾವಿರಕ್ಕೆ ಸೇಲ್ ಆಗ್ತಿವೆ. ಇನ್ನು ಕಾಂಪ್ಲಿಮೆಂಟರಿ ಪಾಸ್ಗಳ ಬೆಲೆ 30ರಿಂದ 40 ಸಾವಿರದವರೆಗೆ ಓಡ್ತಿದೆ.
ಪಂದ್ಯಕ್ಕೆ ಮಳೆ ಭೀತಿ!
ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಹವಮಾನ ವರದಿ ಪ್ರಕಾರ ಬೆಂಗಳೂರಿನಲ್ಲಿ ಮುಂದಿನ 5 ದಿನಗಳವರೆಗೆ ತೀವ್ರ ಮಳೆಸುರಿಯುವ ಸಾಧ್ಯತೆ ದಟ್ಟವಾಗಿದೆ. ಶನಿವಾರ ಸಂಜೆ ಕೂಡ ಹೆಚ್ಚು ಮಳೆ ಸುರಿಯುವ ಸಾಧ್ಯತೆಯಿದೆ. ಹೀಗಾಗಿ ನಾಳಿನ ಪಂದ್ಯ ಮಳೆಗಾಹುತಿಯಾದರೆ ಆಗ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗುತ್ತದೆ.
ಆಗ ಅರ್ಹವಾಗಿಯೇ ಚೆನ್ನೈ ತಂಡ ಪ್ಲೇ ಆಫ್ ಗೆ ಅರ್ಹತೆ ಗಿಟ್ಟಿಸಲಿದೆ. ಒಂದು ವೇಳೆ ಮಳೆ ಬಂದು ನಿಂತು ಪಂದ್ಯ ನಡೆದರೆ ಆಗ ಆರ್ ಸಿಬಿ ಚೆನ್ನೈ ನೀಡುವ ಯಾವುದೇ ಬೃಹತ್ ಗುರಿಯನ್ನು 18 ಓವರ್ ಗಳೊಳಗೆ ಚೇಸ್ ಮಾಡಬೇಕು. ಅಥವಾ ಚೆನ್ನೈ ತಂಡವನ್ನು 18 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಂದ ಸೋಲಿಸಬೇಕು. ಆಗ ಆರ್ ಸಿಬಿ ಪ್ಲೇ ಆಫ್ ಗೆ ಪ್ರವೇಶ ಪಡೆಯುತ್ತದೆ.
ಒಟ್ಟಾರೆ ಈ ಸೀಸನ್ ಐಪಿಎಲ್ನ ಕೊನೆಯ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಿದೆ. ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು, ಪ್ಲೇ ಆಫ್ ಪ್ರವೇಶಿಸಿದ್ರೂ, ಈ ಸೀಸನ್ನಲ್ಲಿ ಮತ್ತೊಮ್ಮೆ ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಆಡಲ್ಲ. ಹೀಗಾಗಿ ಕೊನೆಯ ಬಾರಿ ಸ್ಟೇಡಿಯಂನಲ್ಲಿ ಆರ್ಸಿಬಿಯನ್ನ ಬೆಂಬಲಿಸಲು ಫ್ಯಾನ್ಸ್ ಕಾತುರರಾಗಿದ್ದಾರೆ.