ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮೇ 18 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಪ್ಲೇಆಫ್ ರೇಸ್‌ನಲ್ಲಿದ್ದು, ಈ ಪಂದ್ಯವು ಎರಡೂ ತಂಡಗಳ ಭವಿಷ್ಯವನ್ನು ನಿರ್ಧರಿಸಲಿದೆ. ಉಭಯ ತಂಡಗಳು ಈಗಾಗಲೇ ಪಂದ್ಯಕ್ಕೆ ತಯಾರಿ ನಡೆಸಲು ಸ್ಥಳವನ್ನು ತಲುಪಿವೆ. ಈ ನಿರ್ಣಾಯಕ ಪಂದ್ಯಕ್ಕೆ ಮುನ್ನ ಸಿಎಸ್‌ಕೆಯ ಎಂಎಸ್ ಧೋನಿ ಆರ್‌ಸಿಬಿಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಆರ್‌ಸಿಬಿ ಡ್ರೆಸ್ಸಿಂಗ್ ರೂಂನಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿದ್ದು, ಈ ಕುರಿತು ವಿಡಿಯೋ ಹಂಚಿಕೊಂಡಿರುವ ಆರ್‌ಸಿಬಿ, 'ಬೆಂಗಳೂರಿಗೆ ಸ್ವಾಗತ ಮಹಿ' ಎಂದು ಬರೆದಿದೆ. ಆರ್‌ಸಿಬಿ ಆಟಗಾರರ ನಡುವೆ ನಿಂತು ಚಹಾ ಪಡೆದುಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಪ್ಲೇಆಫ್‌ಗೆ ಹೋಗಲು ಆರ್‌ಸಿಬಿ ತಂಡವು ಸಿಎಸ್‌ಕೆಯನ್ನು ಸೋಲಿಸುವುದು ಮಾತ್ರವಲ್ಲದೆ, 20 ರನ್ ಅಂತರದ ಅಥವಾ 11 ಎಸೆತಗಳು ಇರುವಾಗಲೇ ಗೆಲುವು ಸಾಧಿಸುವ ಅನಿವಾರ್ಯತೆ ಎದುರಾಗಿದೆ. RCB ಈ ಗೆಲುವಿನ ಅಂತರವನ್ನು ಕಾಯ್ದುಕೊಳ್ಳಲು ವಿಫಲವಾದರೆ, ಸೋಲಿನ ಹೊರತಾಗಿಯೂ ಸಿಎಸ್‌ಕೆ ಪ್ಲೇಆಫ್ ಪ್ರವೇಶಿಸುವ ಸಾಧ್ಯತೆಯಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಜಸ್ಥಾನ ರಾಯಲ್ಸ್ (ಆರ್‌ಆರ್) ನಂತರ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಐಪಿಎಲ್ 2024ರ ಪ್ಲೇಆಫ್‌ಗೆ ಅರ್ಹತೆ ಪಡೆದ ಮೂರನೇ ತಂಡವಾಗಿದೆ. ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ ಗುರುವಾರ ಎಸ್‌ಆರ್‌ಎಚ್ ಪ್ಲೇಆಫ್‌ಗೆ ಪ್ರವೇಶ ಪಡೆಯಿತು.
ಸತತ ಮಳೆಯಿಂದಾಗಿ ಟಾಸ್ ವಿಳಂಬವಾಯಿತು ಮತ್ತು ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಎಸ್ಆರ್‌ಎಚ್ ಇದೀಗ 15 ಅಂಕಗಳನ್ನು ಪಡೆದಿದೆ. ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪ್ಲೇಆಫ್ ರೇಸ್‌ನಿಂದ ಹೊರಹಾಕಿತು ಮತ್ತು ಆರ್‌ಸಿಬಿ vs ಸಿಎಸ್‌ಕೆ ಪಂದ್ಯವನ್ನು ಮಾಡು ಇಲ್ಲವೆ ಮಡಿ ಪಂದ್ಯವನ್ನಾಗಿ ಮಾರ್ಪಡಿಸಿತು.
ಗಮನಿಸಬೇಕಾದ ಸಂಗತಿಯೆಂದರೆ, ಲಕ್ನೋ ಸೂಪರ್ ಜೈಂಟ್ಸ್ ಅತ್ಯಂತ ಕಳಪೆ ನೆಟ್ ರನ್ ರೇಟ್‌ನಿಂದಾಗಿ ಪ್ರಾಯೋಗಿಕವಾಗಿ ಪ್ಲೇಆಫ್‌ನಿಂದ ಹೊರಗುಳಿದಿದೆ. ಪ್ಲೇಆಫ್ ಕನಸನ್ನು ಜೀವಂತವಾಗಿಟ್ಟುಕೊಳ್ಳಲು ಎಲ್‌ಎಸ್‌ಜಿ ಲೀಗ್ ಹಂತದ ತನ್ನ ಅಂತಿಮ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಅತ್ಯಂತ ದೊಡ್ಡ ಅಂತರದಿಂದ ಗೆಲ್ಲುವ ಅಗತ್ಯವಿದೆ.