ಅಹ್ಮದಾಬಾದ್: ಅಭಿಮಾನಿಗಳ ಕನಸು ಕೊನೆಗೂ ಭಗ್ನವಾಗಿದ್ದು, ಹಾಲಿ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ 2ನೇ ಕ್ವಾಲಿಫೈಯರ್ ಗೆ ಪ್ರವೇಶ ಪಡೆದಿದೆ.
ಇಂದು ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ನೀಡಿದ 173 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ರಾಜಸ್ತಾನ 19 ಓವರ್ ನಲ್ಲೇ ಗುರಿ ತಲುಪಿ 2ನೇ ಕ್ವಾಲಿಫೈಯರ್ ಗೆ ಪ್ರವೇಶ ಪಡೆಯಿತು. ಆರಂಭದಿಂದಲೂ ಸಕಾರಾತ್ಮತವಾಗಿ ಆಡಿದ ರಾಜಸ್ತಾನ 19 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ರಾಜಸ್ತಾನ ಪರ ಯಶಸ್ವಿ ಜೈಸ್ವಾಲ್ 45ರನ್ ಗಳಿಸಿದರೆ, ರಿಯಾನ್ ಪರಾಗ್ 36 ಮತ್ತು ಶಿಮ್ರಾನ್ ಹೇಟ್ಮೆಯರ್ 26 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಬಂದ ರೋವ್ಮನ್ ಪವೆಲ್ 16 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಮುಗಿಸಿದರು.
ಆರ್ ಸಿಬಿ ಪರ ಮಹಮದ್ ಸಿರಾಜ್ 2, ಲಾಕಿ ಫರ್ಗುಸನ್, ಕರಣ್ ಶರ್ಮಾ, ಕೆಮರಾನ್ ಗ್ರೀನ್ ತಲಾ ಒಂದು ವಿಕೆಟ್ ಪಡೆದರು.
ಈ ಗೆಲುವಿನ ಮೂಲಕ ರಾಜಸ್ತಾನ ತಂಡ 2ನೇ ಕ್ವಾಲಿಫೈಯರ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.