ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಭಾರತ ತಂಡ 'ಸಿಕ್ಸರ್ ಗಳ ಶತಕ'ದ ಮೂಲಕ ದಾಖಲೆ ನಿರ್ಮಿಸಿದೆ.
ಹೌದು.. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದ್ದು, ಇನ್ನೂ 174 ರನ್ ಗಳ ಹಿನ್ನಡೆಯಲ್ಲಿದೆ.
ಭಾರತದ ಪರ ನಾಯಕ ರೋಹಿತ್ ಶರ್ಮಾ (52 ರನ್), ವಿರಾಟ್ ಕೊಹ್ಲಿ (ಅಜೇಯ 51 ರನ್) ಮತ್ತು ಸರ್ಫರಾಜ್ ಖಾನ್ (ಅಜೇಯ 50) ಅರ್ಧಶತಕಗಳನ್ನು ಸಿಡಿಸಿದ್ದು, ಜೈಸ್ವಾಲ್ 35ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ.
ಸರ್ಫರಾಜ್ ಖಾನ್ 4ನೇ ಅರ್ಧಶತಕವಾಗಿದ್ದು, ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಇದು 31ನೇ ಟೆಸ್ಟ್ ಅರ್ಧಶತಕವಾಗಿದೆ.
ಸಿಕ್ಸರ್ ಗಳ ದಾಖಲೆ
ಇನ್ನು ಈ ಪಂದ್ಯದಲ್ಲಿ ಭಾರತ ಒಟ್ಟು 5 ಸಿಕ್ಸರ್ ಗಳನ್ನು ಸಿಡಿಸಿದ್ದು ಈ ಪೈಕಿ ಸರ್ಫರಾಜ್ ಖಾನ್ ಒಬ್ಬರೇ 3 ಸಿಕ್ಸರ್ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಲಾ ಒಂದೊಂದು ಸಿಕ್ಸರ್ ಸಿಡಿಸಿದ್ದಾರೆ. ಅಂತೆಯೇ ಈ ಐದು ಸಿಕ್ಸರ್ ಗಳ ಮೂಲಕ ಭಾರತ ತಂಡ ಹಾಲಿ 2024ರಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 100 ಸಿಕ್ಸರ್ ಗಳನ್ನು ಸಿಡಿಸಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.
ಈ ಹಿಂದೆ 2022ರಲ್ಲಿ ಇಂಗ್ಲೆಂಡ್ ತಂಡ 89 ಸಿಕ್ಸರ್ ಗಳನ್ನು ಸಿಡಿಸಿತ್ತು. ಇದು ಈ ವರೆಗೆ ತಂಡವೊಂದು ಒಂದು ವರ್ಷದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಗಳಿಸಿದ ಗರಿಷ್ಠ ಸಿಕ್ಸರ್ ಗಳ ಸಂಖ್ಯೆಯಾಗಿತ್ತು. ಆದರೆ ಅದನ್ನು ಭಾರತ ಹಿಂದಿಕ್ಕಿತ್ತು. ಮಾತ್ರವಲ್ಲದೇ ಇದೀಗ ಸಿಕ್ಸರ್ ಗಳ ಸಂಖ್ಯೆಯನ್ನು ಶತಕಕ್ಕೆ ಏರಿಸಿಕೊಂಡು ತನ್ನದೇ ದಾಖಲೆಯನ್ನು ತಾನೇ ಮುರಿದಿದೆ. ಹಾಲಿ ವರ್ಷ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ಸಿಕ್ಸರ್ ಗಳನ್ನು ಸಿಡಿಸಿದ ಪಟ್ಟಿಯಲ್ಲಿ 68 ಸಿಕ್ಸರ್ ಗಳನ್ನು ಸಿಡಿಸಿರುವ ಇಂಗ್ಲೆಂಡ್ ತಂಡ 2ನೇ ಸ್ಥಾನದಲ್ಲಿದೆ.
Most sixes by a team in a calendar year
102* - India in 2024
89 - England in 2022
87 - India in 2021
81 - New Zealand in 2014
71 - New Zealand in 2013
*68 sixes by England currently - the second most by a team this year in 2024.