ಚೆನ್ನೈ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ 287 ರನ್ ಗೆ ಡಿಕ್ಲೇರ್ ಮಾಡಿಕೊಂಡಿದ್ದು, ಬಾಂಗ್ಲಾದೇಶಕ್ಕೆ ಗೆಲ್ಲಲು 515 ರನ್ ಬೃಹತ್ ಗುರಿ ನೀಡಿದೆ.
2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 287 ಗಳಿಸಿತ್ತು. ಭಾರತದ ಪರ ಶುಭ್ ಮನ್ ಗಿಲ್ (ಅಜೇಯ 119 ರನ್) ಮತ್ತು ರಿಷಬ್ ಪಂತ್ (109 ರನ್) ಶತಕ ಸಿಡಿಸಿ ಭಾರತಕ್ಕೆ ಬೃಹತ್ ಮುನ್ನಡೆ ತಂದುಕೊಟ್ಟರು.
109 ರನ್ ಗಳಿಸಿ ಪಂತ್ ಔಟಾದರೆ ಬಳಿಕ ಕ್ರೀಸ್ ಗೆ ಬಂದ ಕೆಎಲ್ ರಾಹುಲ್ ಅಜೇಯ 22 ರನ್ ಗಳಿಸಿದರು. ಈ ವೇಳೆ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು.
ಪಂತ್-ಗಿಲ್ ಶತಕದ ಜುಗಲ್ ಬಂದಿ
ಇನ್ನು 2ನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ರಿಷಬ್ ಪಂತ್ ಮತ್ತು ಶುಭ್ ಮನ್ ಗಿಲ್ ಜೋಡಿ ಶತಕಗಳ ಮೂಲಕ ಭರ್ಜರಿ ಬ್ಯಾಟಿಂಗ್ ಮಾಡಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್ 161 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತೆಯೇ ಪಂತ್ ಕೂಡ 128 ಎಸೆತಗಳಲ್ಲಿ 109 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ 13 ಬೌಂಡರಿ ಮತ್ತು 4 ಸಿಕ್ಸರ್ ಸೇರಿತ್ತು.
ಪಂತ್ ಈ ಹಿಂದೆ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಕ್ರಿಕೆಟ್ ನಿಂದ ದೂರಾಗಿದ್ದರು. ಆದರ ಬಳಿಕ ಭರ್ಜರಿ ಕಮ್ ಬ್ಯಾಕ್ ಮಾಡಿರುವ ಪಂತ್ 634 ದಿನಗಳ ಬಳಿಕ ಟೆಸ್ಟ್ ಶತಕ ಸಿಡಿಸಿದ್ದಾರೆ.
ಬಾಂಗ್ಲಾದೇಶ ಎಚ್ಚರಿಕೆಯ ಆಟ
ಇನ್ನು ಇತ್ತೀಚಿನ ವರದಿ ಬಂದಾಗ 515 ರನ್ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೇ 54 ರನ್ ಗಳಿಸಿದೆ. 32ರನ್ ಗಳಿಸಿರುವ ಆರಂಭಿಕ ಆಟಗಾರ ಝಾಕಿರ್ ಹಸನ್ ಮತ್ತು 20 ರನ್ ಗಳಿಸಿರುವ ಶಾದ್ಮನ್ ಇಸ್ಲಾಂ ಬ್ಯಾಟಿಂಗ್ ಮುಂದುವರೆಸಿದ್ದಾರೆ.