ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಾಲಿಗೆ ಶುಭಾರಂಭವಾಗಿದೆ. ಆರ್‌ಸಿಬಿ ತಾನು ಆಡಿರುವ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಕೂಡ ಮೊದಲ ಎರಡು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಮಾಡಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆರ್‌ಸಿಬಿಯನ್ನು ಬಡ ತಂಡ ಎಂದು ಟೀಕಿಸಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸೆಹ್ವಾಗ್ ಹೇಳಿಕೆಗೆ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂದ್ಯಾವಳಿಯ ಆರಂಭದಿಂದಲೂ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಅಂಕಪಟ್ಟಿಯಲ್ಲಿ ನಂಬರ್ 1 ಸ್ಥಾನ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಸೆಹ್ವಾಗ್ ಈ ಹೇಳಿಕೆ ನೀಡಿದ್ದಾರೆ. ಆರ್‌ಸಿಬಿಯಂತಹ ಕಳಪೆ ತಂಡಗಳು ಐಪಿಎಲ್ ಪ್ರಶಸ್ತಿಯನ್ನು ಗೆದ್ದು ಆ ಯಶಸ್ಸನ್ನು ಎಂದಿಗೂ ಅನುಭವಿಸದ ಕಾರಣ ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್ ಸ್ಥಾನದಲ್ಲಿದ್ದುಕೊಂಡು ಆನಂದಿಸಲು ಅವಕಾಶ ಪಡೆಯಬೇಕು ಎಂದು ಹೇಳಿದ್ದಾರೆ.
'ಗರೀಬೊಂ ಕೊ ಭಿ ತೋ ರೆಹ್ನೆ ದೇ, ಫೋಟೋ ಲೆ ಲೆ ತೋಡಿ ಡೆರ್. ಪತಾ ನಹಿ ಕಿತ್ನಿನ್ ದೆರ್ ಗರೀಬ್ ಲೋಗ್ ಊಪರ್ ರಹೇಂಗೆ. (ಬಡ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ ಟಾಪ್‌ನಲ್ಲೇ ಇರಲಿ, ಅವರು ಫೋಟೋಗಳನ್ನು ಕ್ಲಿಕ್ ಮಾಡಿಕೊಳ್ಳಲಿ. ಅವರು ಎಷ್ಟು ಕಾಲ ಟಾಪ್‌ನಲ್ಲಿ ಇರುತ್ತಾರೆಂದು ಯಾರಿಗೆ ತಿಳಿದಿದೆ)' ಎಂದು ಕ್ರಿಕ್‌ಬಜ್‌ನಲ್ಲಿ ನಡೆದ ಮಾತುಕತೆಯಲ್ಲಿ ಸೆಹ್ವಾಗ್ ಹೇಳಿದ್ದಾರೆ.
ತಮ್ಮ ಸಕ್ರಿಯ ದಿನಗಳಲ್ಲಿ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಸೆಹ್ವಾಗ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದು, ಅವರು ಆಡಿದ ವರ್ಷಗಳಲ್ಲಿ ಎಂದಿಗೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ, ಇದೀಗ ಆರ್ಥಿಕವಾಗಿ ಬಲಿಷ್ಠವಾಗಿದ್ದರೂ, ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲದ ಫ್ರಾಂಚೈಸಿಗಳನ್ನು ಗುರಿಯಾಗಿಟ್ಟುಕೊಂಡು ಸೆಹ್ವಾಗ್ ಟೀಕೆ ಮಾಡಿದ್ದಾರೆ.
'ನಾನು ಹಣದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನೀವು ಯೋಚಿಸುತ್ತಿರುವಿರಿ? ಇಲ್ಲ. ಅವರೆಲ್ಲರೂ ಹಣದ ವಿಷಯದಲ್ಲಿ ಶ್ರೀಮಂತರು. ಫ್ರಾಂಚೈಸಿಗಳು ಪ್ರತಿ ಆವೃತ್ತಿಯಲ್ಲಿ 400-500 ಕೋಟಿ ಗಳಿಸುತ್ತವೆ. ನಾನು ಅದರ ಬಗ್ಗೆ ಮಾತನಾಡುತ್ತಿಲ್ಲ. ಒಂದೇ ಒಂದು ಟ್ರೋಫಿಯನ್ನು ಗೆಲ್ಲದವರನ್ನು ನಾನು ಗರೀಬ್ ಎಂದು ಕರೆಯುತ್ತಿದ್ದೇನೆ' ಎಂದು ಅವರು ಹೇಳಿದರು.
ಸದ್ಯ 18ನೇ ಆವೃತ್ತಿ ನಡೆಯುತ್ತಿದ್ದು, ಈವರೆಗೂ ಆರ್‌ಸಿಬಿ, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಎಲ್‌ಎಸ್‌ಜಿ 2022ರಲ್ಲಿ ಟಿ20 ಲೀಗ್‌ನ ಭಾಗವಾಗಿದೆ.