ಬೆಂಗಳೂರು: ಐಪಿಎಲ್ ಟೂರ್ನಿಯ ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲುವಿನ ರೂವಾರಿಯಾದ ಮಹಮದ್ ಸಿರಾಜ್ ಪಂದ್ಯದ ಬಳಿಕ ಭಾವುಕರಾದರು.
ನಿನ್ನೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ತವರಿನ ಚೊಚ್ಚಲ ಪಂದ್ಯದಲ್ಲೇ ಆರ್ ಸಿಬಿ ಮುಗ್ಗರಿಸಿದ್ದು, ಗುಜರಾತ್ ಟೈಟನ್ಸ್ ವಿರುದ್ಧ 8 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.
ಬೆಂಗಳೂರು ತಂಡ ನೀಡಿದ್ದ 170 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ತಂಡ 17.5 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಈ ಪಂದ್ಯದಲ್ಲಿ ಬೆಂಗಳೂರು ತಂಡದ ವಿರುದ್ಧ ಪ್ರಭಾವಿ ಬೌಲಿಂಗ್ ಮಾಡಿದ ಮಹಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದ ಆರ್ಸಿಬಿ ತಂಡದ ಮಾಜಿ ವೇಗಿ ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದರು. ಪವರ್ಪ್ಲೇನಲ್ಲೇ ದೇವದತ್ ಪಡಿಕ್ಕಲ್ ಹಾಗೂ ಫಿಲ್ ಸಾಲ್ಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಸಿರಾಜ್, ಆರ್ಸಿಬಿ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು.
ಆ ಬಳಿಕ ಲಿಯಾಮ್ ಲಿವಿಂಗ್ಸ್ಟೋನ್ ವಿಕೆಟ್ ಕಬಳಿಸಿದರು. 4 ಓವರ್ಗಳಲ್ಲಿ ಮೊಹಮ್ಮದ್ ಸಿರಾಜ್ ಕೇವಲ 19 ರನ್ ನೀಡಿ 3 ವಿಕೆಟ್ ಕಬಳಿಸಿದರು.
ಮಹಮದ್ ಸಿರಾಜ್ ಭಾವುಕ
ಇನ್ನು ಪಂದ್ಯ ಮುಕ್ತಾಯದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕಾರ ವೇಳೆ ಮಾತನಾಡಿದ ಮಹಮದ್ ಸಿರಾಜ್ ಭಾವುಕರಾದರು. 'ಆರ್ಸಿಬಿ ವಿರುದ್ಧ ಆಡುವಾಗ ನಾನು ಸ್ವಲ್ಪ ಭಾವುಕನಾಗಿದ್ದೆ. ಏಕೆಂದರೆ ಕಳೆದ 7 ವರ್ಷಗಳ ಕಾಲ ನಾನು ಆರ್ಸಿಬಿ ಪರ ಆಡಿದ್ದೆ. ಇದೀಗ ಕೆಂಪು ಬಣ್ಣದ ಜೆರ್ಸಿಯಿಂದ ನೀಲಿ ಬಣ್ಣದ ಜೆರ್ಸಿಗೆ ಬದಲಾಗಿದ್ದೇನೆ. ಇದಾಗ್ಯೂ ಆರ್ಸಿಬಿ ತಂಡವನ್ನು ಎದುರಿಸುವುದು ನಿಜವಾಗೂ ಭಾವನಾತ್ಮಕವಾಗಿತ್ತು. ಆರಂಭದಲ್ಲಿ ಭಾವುಕನಾದರೂ, ಚೆಂಡು ಪಡೆದ ಬಳಿಕ ನಾನು ಸರಿಯಾದೆ. ಏಕೆಂದರೆ ನಾನು ಎದುರಾಳಿಯಾಗಿ ಕಣಕ್ಕಿಳಿದಿರುವುದು ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಭಾವುಕತೆಯನ್ನು ಸೈಡ್ನಲ್ಲಿರಿಸುವುದು ಅನಿವಾರ್ಯವಾಗಿತ್ತು' ಎಂದಿದ್ದಾರೆ.
ನೆಹ್ರಾ-ಇಶಾಂತ್ ಶರ್ಮಾ ಬೆಂಬಲ
ಇನ್ನು ಆರ್ ಸಿಬಿ ವಿರುದದ್ಧ ತಮ್ಮ ಉತ್ತಮ ಪ್ರದರ್ಶನಕ್ಕೆ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಹಾಗೂ ಸಹ ಆಟಗಾರ ಇಶಾಂತ್ ಶರ್ಮಾ ನೀಡಿದ ಬೆಂಬಲವೇ ಕಾರಣ ಎಂದು ಹೇಳಿದ ಸಿರಾಜ್, 'ಕಳೆದ ಕೆಲ ತಿಂಗಳಿಂದ ನಾನು ಸ್ಥಿರವಾಗಿ ಆಡುತ್ತಿದ್ದೆ. ಇದರಿಂದ ನಾನು ನನ್ನ ಬೌಲಿಂಗ್ನಲ್ಲಿ ಕೆಲ ತಪ್ಪುಗಳನ್ನು ಮಾಡುತ್ತಿದ್ದೆ. ಬಳಿಕ ನನ್ನ ತಪ್ಪುಗಳನ್ನು ಸರಿಪಡಿಸಿಕೊಂಡೆ.
ನನ್ನ ಫಿಟ್ನೆಸ್‌ನಲ್ಲಿ ಕೆಲಸ ಮಾಡಿದೆ. ಗುಜರಾತ್ ಟೈಟಾನ್ಸ್ ತಂಡ ನನ್ನನ್ನು ಆಯ್ಕೆ ಮಾಡಿದ ಬಳಿಕ, ನಾನು ಆಶಿಶ್ ನೆಹ್ರಾ ಅವರೊಂದಿಗೆ ಮಾತನಾಡಿದೆ. ಬೌಲಿಂಗ್ ಅನ್ನು ಆನಂದಿಸಿ ಬೌಲಿಂಗ್ ಮಾಡು ಎಂದರು. ಇಶಾಂತ್ ಶರ್ಮಾ ನನಗೆ ಯಾವ ಲೈನ್ ಮತ್ತು ಲೆಂಗ್ತ್ ಬೌಲಿಂಗ್ ಮಾಡಬೇಕೆಂದು ಹೇಳಿಕೊಟ್ಟರು. ಈ ಮೂಲಕ ನನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಆರ್ಸಿಬಿ ವಿರುದ್ಧ ಅತ್ಯುತ್ತಮವಾಗಿ ದಾಳಿ ಸಂಘಟಿಸಿದೆ ಎಂದು ಸಿರಾಜ್ ಹೇಳಿದ್ದಾರೆ.
7 ವರ್ಷ ಆರ್ ಸಿಬಿ ಗೆ ಆಡಿದ್ದ ಸಿರಾಜ್
ಸಿರಾಜ್ ಕಳೆದ 7 ವರ್ಷಗಳ ಕಾಲ ಆರ್ಸಿಬಿ ಪರ ಆಡಿದ್ದರು. ಆದರೆ ಸಿರಾಜ್ ಬೆಂಗಳೂರಿನಲ್ಲಿ ಒಮ್ಮೆಯೂ ಇಂತಹದೊಂದು ಪ್ರದರ್ಶನ ನೀಡಿರಲಿಲ್ಲ. ಆದರೆ ಕಳೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿ ಸಿರಾಜ್ ರನ್ನು ಕೈ ಬಿಟ್ಟಿತ್ತು. ಬಳಿಕ ಸಿರಾಜ್ ಗುಜರಾತ್ ಟೈಟನ್ಸ್ ಪಾಲಾಗಿದ್ದರು. ಇದೀಗ ಇದೇ ಮೊದಲ ಬಾರಿಗೆ ಮೊಹಮ್ಮದ್ ಸಿರಾಜ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 4 ಓವರ್ಗಳಲ್ಲಿ 20 ಕ್ಕಿಂತ ಕಡಿಮೆ ರನ್ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಮೊಹಮ್ಮದ್ ಸಿರಾಜ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 4 ಓವರ್ಗಳಲ್ಲಿ 20 ಕ್ಕಿಂತ ಕಡಿಮೆ ರನ್ ನೀಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 4 ಓವರ್ಗಳಲ್ಲಿ 20 ಕ್ಕಿಂತ ಕಡಿಮೆ ರನ್ ನೀಡಿ ಐಪಿಎಲ್ನ ಸಕ್ರಿಯ ಬೌಲರ್ ಎಂಬ ದಾಖಲೆಯನ್ನು ಸಹ ಸಿರಾಜ್ ತಮ್ಮದಾಗಿಸಿಕೊಂಡಿದ್ದಾರೆ. 7 ವರ್ಷಗಳಲ್ಲಿ ಆರ್ಸಿಬಿ ಪರ ಕಣಕ್ಕಿಳಿದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಾಧ್ಯವಾಗದ ಸಾಧನೆಯನ್ನು ಮೊಹಮ್ಮದ್ ಸಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮೊದಲ ಪಂದ್ಯದಲ್ಲೇ ಸಾಧಿಸಿರುವುದೇ ವಿಶೇಷ.