ಲಕ್ನೋ ಸೂಪರ್ ಜೈಂಟ್ಸ್ (LSG) ಸ್ಪಿನ್ನರ್ ದಿಗ್ವೇಶ್ ರಾಠಿ ಈಗ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ನೇ ಆವೃತ್ತಿಯಲ್ಲಿ ತಮ್ಮ ಬೌಲಿಂಗ್ ಮೂಲಕ ಅನೇಕರನ್ನು ಆಕರ್ಷಿಸಿದ್ದಾರೆ. ದಿಗ್ವೇಶ್ ನಿರ್ಣಾಯಕ ಹಂತಗಳಲ್ಲಿ ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ಮೆಗಾ ಹರಾಜಿನಲ್ಲಿ ಲಕ್ನೋ ತಂಡವು ದಿಗ್ವೇಶ್ ಅವರನ್ನು 30 ಲಕ್ಷಕ್ಕೆ ಖರೀದಿಸಿತ್ತು. ಆದರೆ, ಐಪಿಎಲ್ ಟೂರ್ನಿಯಲ್ಲಿ ವಿಕೆಟ್ ಪಡೆದ ನಂತರ ನಡೆಸಿದ ಸಂಭ್ರಮಾಚರಣೆಯಿಂದಾಗಿ ಫ್ರಾಂಚೈಸಿ ತನಗೆ ಪಾವತಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ದಂಡವಾಗಿ ಪಾವತಿಸುವಂತಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ರಾಠಿಗೆ ಎರಡು ಬಾರಿ ದಂಡ ವಿಧಿಸಿದ್ದು, ಈ ಶಿಕ್ಷೆಗಳು ಅನ್ಯಾಯವಾಗಿವೆ ಎಂದು ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಸೈಮನ್ ಡೌಲ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ನಡೆಯುತ್ತಿರುವ ಐಪಿಎಲ್ 18ನೇ ಆವೃತ್ತಿಯ ತಜ್ಞರಲ್ಲಿ ಒಬ್ಬರಾಗಿರುವ ಡೌಲ್, ಭಾರತದ ಹಿರಿಯ ತಾರೆಯರು ರಾಠಿಗಿಂತ ಕೆಟ್ಟದಾಗಿ ಆಡುವುದನ್ನು ತಾನು ನೋಡಿದ್ದೇನೆ. ಇತರ ದೊಡ್ಡ ಆಟಗಾರರ ವರ್ತನೆಯನ್ನು ನಿರ್ಲಕ್ಷ್ಯಿಸುವಾಗ ಎಲ್‌ಎಸ್‌ಜಿ ಸ್ಪಿನ್ನರ್‌ಗೆ ಎರಡು ಬಾರಿ ದಂಡ ವಿಧಿಸಿದೆ ಎಂದಿದ್ದಾರೆ.
'ತಂಡವು ಅದನ್ನು (ದಂಡ) ಪಾವತಿಸಬೇಕಾಗಿದೆ. ನನಗೆ ಅದು ಇಷ್ಟವಿಲ್ಲ. ನನಗೆ ಆಚರಣೆಗಳು ತುಂಬಾ ಇಷ್ಟ. ಅವರು ಯಾವುದೇ ತಪ್ಪು ಮಾಡಿದ್ದಾರೆಂದು ನಾನು ಭಾವಿಸುವುದಿಲ್ಲ. ಹಿರಿಯ ಭಾರತೀಯ ಆಟಗಾರರು ಇನ್ನೂ ಕೆಟ್ಟದಾಗಿ ವರ್ತಿಸುವುದನ್ನು ಹಾಗೂ ಅವರು ಯಾವುದೇ ದಂಡ ಪಾವತಿಸುವ ಶಿಕ್ಷೆಯನ್ನು ಪಡೆಯದಿರುವುದನ್ನು ನಾನು ನೋಡಿದ್ದೇನೆ. ನೋಟ್‌ಬುಕ್ ಸೆಲಬ್ರೇಷನ್ ಮಾಡಿದ್ದಕ್ಕೆ ದಂಡ ವಿಧಿಸಿದ್ದಕ್ಕೆ ಅವರು ಇತರರಿಗೆ ಎಚ್ಚರಿಕೆ ನೀಡುತ್ತಿದ್ದಾರೆಯೇ?' ಡೌಲ್ ಕ್ರಿಕ್‌ಬಜ್‌ನಲ್ಲಿ ನಡೆದ ಮಾತುಕತೆಯಲ್ಲಿ ತಿಳಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ನಂತರ ದಿಗ್ವೇಶ್ ಮೊದಲು ಸೈನ್-ಆಫ್ ಆಚರಣೆಯನ್ನು ಪ್ರಾರಂಭಿಸಿದರು. ದಿಗ್ವೇಶ್ ಮತ್ತು ಪ್ರಿಯಾನ್ಶ್ ಒಳ್ಳೆಯ ಸ್ನೇಹಿತರು ಎಂದು ನಂತರ ಬಹಿರಂಗವಾಯಿತು. ಎಲ್‌ಎಸ್‌ಜಿ ಸ್ಪಿನ್ನರ್‌ನ ಸಂಭ್ರಮಾಚರಣೆಯಿಂದ ಮಂಡಳಿಯು ರಾಠಿಗೆ ದಂಡ ವಿಧಿಸಿತು.
'ಪ್ರಿಯಾಂಶ್ ಆರ್ಯ ಅವರು ದಿಗ್ವೇಶ್ ರಾಠಿ ಅವರ ಉತ್ತಮ ಸ್ನೇಹಿತ. ಅವರು ಅದನ್ನು ಸ್ನೇಹಪೂರ್ವಕವಾಗಿ ಮಾಡಿದರು. ಆದರೆ, ಅವರಿಗೆ ದಂಡ ವಿಧಿಸಲಾಯಿತು. ಅವರು ಅದನ್ನು ಪುನರಾವರ್ತಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಸಹ ಎಲ್‌ಎಸ್‌ಜಿ ಸ್ಪಿನ್ನರ್ ಶಹಬಾಜ್ ಅಹ್ಮದ್ ಹೇಳಿದ್ದಾರೆ.
ಮಂಗಳವಾರ ನಡೆದ ಐಪಿಎಲ್ ಲೀಗ್ ಪಂದ್ಯದಲ್ಲಿ ಲಕ್ನೋ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿದ ವೇಳೆ ವಿಕೆಟ್ ಕಿತ್ತಾಗ ರಾಠಿ ತಮ್ಮ ಸಂಭ್ರಮಾಚರಣೆಯನ್ನು ಬದಲಾಯಿಸಿಕೊಂಡರು. ಈ ಬಾರಿ ಮಂಡಳಿಯು ತನಗೆ ದಂಡ ವಿಧಿಸುವುದನ್ನು ತಡೆಯಬೇಕು ಎನ್ನುವ ಉದ್ದೇಶದಿಂದ ರಾಠಿ ಮೈದಾನದಲ್ಲಿ ಸಿಗ್ನೇಚರ್ ಆಚರಣೆಯನ್ನು ಮಾಡಿದರು.