ಗುರುವಾರ ನಡೆದ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಗಾಯಗೊಂಡಿದ್ದು, ಮೊಣಕೈಯಲ್ಲಿ ಮೂಳೆ ಮುರಿತದಿಂದಾಗಿ ಐಪಿಎಲ್ 2025ನೇ ಆವೃತ್ತಿಯಿಂದಲೇ ಹೊರಗುಳಿಯುವಂತಾಗಿದೆ. CSK ತಂಡ ಈಗಾಗಲೇ ಸತತ ನಾಲ್ಕು ಸೋಲಿನಿಂದ ಕಂಗೆಟ್ಟಿದ್ದು, ಇದೀಗ ನಾಯಕನ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಗಾಯಕ್ವಾಡ್ ಅವರ ಅಲಭ್ಯತೆಯನ್ನು ದೃಢಪಡಿಸಿದ್ದಾರೆ. ಗಾಯಕ್ವಾಡ್ ಟೂರ್ನಿಯಿಂದಲೇ ಹೊರಗುಳಿದಿದ್ದು, ಈಗ ಎಲ್ಲರ ಕಣ್ಣುಗಳು ಎಂಎಸ್ ಧೋನಿಯತ್ತ ನೆಟ್ಟಿವೆ. ಸಿಎಸ್‌ಕೆ ತಂಡವನ್ನು ಸ್ಮರಣೀಯ ಐಪಿಎಲ್ 2023ನೇ ಪ್ರಶಸ್ತಿಗೆ ಮುನ್ನಡೆಸಿದ ನಂತರ ಇದೇ ಮೊದಲ ಬಾರಿಗೆ ನಾಯಕತ್ವವನ್ನು ಪುನರಾರಂಭಿಸಲಿದ್ದಾರೆ.
ಸಿಎಸ್‌ಕೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ 28 ವರ್ಷದ ಗಾಯಕ್ವಾಡ್ ತಮ್ಮ ನಿರಾಶೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. 'ದುರದೃಷ್ಟವಶಾತ್ ಮೊಣಕೈ ಗಾಯದಿಂದಾಗಿ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯುತ್ತಿರುವುದರಿಂದ ನನಗೆ ನಿಜವಾಗಿಯೂ ನೋವಾಗಿದೆ. ಇಲ್ಲಿಯವರೆಗೆ ನಿಮ್ಮ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಇದು ನಿಜವಾಗಿಯೂ ಬಹಳಷ್ಟು ಅರ್ಥಪೂರ್ಣವಾಗಿದೆ' ಎಂದಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಆರಂಭಿಕ ಪಂದ್ಯದ ಗೆಲುವಿನ ನಂತರ ಸಿಎಸ್‌ಕೆ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಕೇವಲ ಎರಡು ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ತಂಡಕ್ಕೆ ಗಾಯಕ್ವಾಡ್ ಅವರ ಸ್ಥಿರತೆ ಮತ್ತು ರನ್‌ಗಳು ಅಗತ್ಯವಾಗಿತ್ತು. ಆದರೆ, ಗಾಯದಿಂದಾಗಿ ಅವರು ಹೊರಗುಳಿಯುವಂತಾಗಿದೆ.