ಜೈಪುರದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಭರ್ಜರಿ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಅಜೇಯ 62 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾದರು. ಆರ್‌ಸಿಬಿ 2.3 ಓವರ್‌ಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು. ಕೊಹ್ಲಿ 54 ರನ್ ಗಳಿಸಿದ್ದಾಗ, ಆರ್‌ಆರ್ ನಾಯಕ ಮತ್ತು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಬಳಿ ತೆರಳಿ ತಮ್ಮ ಹೃದಯ ಬಡಿತವನ್ನು ಪರೀಕ್ಷಿಸಲು ಕೇಳಿದ್ದಾರೆ. ನಂತರ ಸಂಜು ಕೊಹ್ಲಿ ಎದೆ ಮೇಲೆ ಕೈಯಿಟ್ಟು ಹೃದಯ ಬಡಿತವನ್ನು ಪರೀಕ್ಷಿಸಿದ್ದಾರೆ.
ವಿರಾಟ್ ಕೊಹ್ಲಿ 39 ಎಸೆತಗಳಲ್ಲಿ ಲಾಂಗ್ ಆನ್ ಮೂಲಕ ದೊಡ್ಡ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಗಳಿಸಿದರು. ಮುಂದಿನ ಎಸೆತದಲ್ಲಿ ದೇವದತ್ ಪಡಿಕ್ಕಲ್ ಜೊತೆ ಸೇರಿ ಎರಡು ರನ್ ಗಳಿಸಿದರು. ಆ ವೇಳೆ, 36 ವರ್ಷದ ಆಟಗಾರ ಕೊಹ್ಲಿ, ಸ್ಯಾಮ್ಸನ್ ಬಳಿ ತೆರಳಿ ತಮ್ಮ ಹೃದಯ ಬಡಿತವನ್ನು ಪರೀಕ್ಷಿಸಲು ಕೇಳಿದ್ದಾರೆ. ಆಗ ಸ್ಯಾಮ್ಸನ್ ಗ್ಲೌಸ್ ತೆಗೆದು ವಿರಾಟ್ ಕೊಹ್ಲಿ ಅವರ ಎದೆ ಮೇಲೆ ಕೈಯಿಟ್ಟು ಪರೀಕ್ಷಿಸಿದ್ದಾರೆ. ಅಲ್ಲಿಂದ ಹಿಂತಿರುಗಿದ ಕೊಹ್ಲಿ ಮತ್ತೊಮ್ಮೆ ತಮ್ಮ ಎದೆ ಹಿಡಿದು ಸಾವರಿಸಿಕೊಂಡಿದ್ದಾರೆ. ಮತ್ತೆ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಭಾನುವಾರ ಜೈಪುರದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ರಾಜಸ್ಥಾನ್ ರಾಯಲ್ಸ್ ನೀಡಿದ 174 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ ಪರವಾಗಿ ಇಂಗ್ಲೆಂಡ್‌ನ ಫಿಲ್ ಸಾಲ್ಟ್ 33 ಎಸೆತಗಳಲ್ಲಿ 65 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ವಿರಾಟ್ ಕೊಹ್ಲಿ ಅಜೇಯ 62 ರನ್ ಗಳಿಸಿದರೆ, ಫಿಲ್ ಸಾಲ್ಟ್ ಔಟಾದ ಬಳಿಕ ಬಂದ ದೇವದತ್ ಪಡಿಕ್ಕಲ್ ಔಟಾಗದೆ 28 ಎಸೆತಗಳಲ್ಲಿ 40 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸದ್ಯ ಉತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ ಈ ಆವೃತ್ತಿಯ ಮೂರನೇ ಮತ್ತು ಟಿ20 ಟೂರ್ನಮೆಂಟ್‌ನಲ್ಲಿ 66ನೇ ಅರ್ಧಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರೊಂದಿಗೆ ಸಮಬಲ ಸಾಧಿಸಿದರು.
ಈ ಮೂಲಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ತಮ್ಮ 100ನೇ ಅರ್ಧಶತಕ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ ಡೇವಿಡ್ ವಾರ್ನರ್ 108 ಅರ್ಧಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ 401 ಪಂದ್ಯಗಳಲ್ಲಿ 100 ಅರ್ಧಶತಕ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ 90 ಅರ್ಧಶತಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ