ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಇತ್ತೀಚೆಗೆ ತಮ್ಮ ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಸುದ್ದಿಯಾಗಿದ್ದರು. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ಮತ್ತು ಭಾರತಕ್ಕಾಗಿ 104 ಏಕದಿನ ಪಂದ್ಯಗಳು ಮತ್ತು 17 ಟೆಸ್ಟ್ ಪಂದ್ಯಗಳನ್ನು ಆಡಿರುವ ಕಾಂಬ್ಳಿ ಇದೀಗ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. 2024ರ ಡಿಸೆಂಬರ್ 21 ರಂದು ಮೂತ್ರನಾಳ ಸೋಂಕಿನಿಂದಾಗಿ ಅವರನ್ನು ಥಾಣೆಯ ಅಕೃತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸಮಸ್ಯೆಯೊಂದಿಗೆ ಕಾಂಬ್ಳಿ ಅವರು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಮತ್ತು ಖ್ಯಾತ ಕಮೆಂಟೇಟರ್ ಸುನಿಲ್ ಗವಾಸ್ಕರ್ ಸಹಾಯ ಹಸ್ತ ಚಾಚಿದ್ದಾರೆ.
2024ರ ಡಿಸೆಂಬರ್‌ನಲ್ಲಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ದಂತಕಥೆ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಉದ್ಘಾಟನೆಯ ಸಂದರ್ಭದಲ್ಲಿ ಗವಾಸ್ಕರ್ ಅವರು ಕಾಂಬ್ಳಿ ಅವರಿಗೆ ಸಹಾಯ ಮಾಡುವುದಾಗಿ ಹೇಳಿದ್ದರು. ಅದರಂತೆ ಈಗ ಕಾಂಬ್ಳಿ ಅವರಿಗೆ ಮಾಸಿಕ ಸಹಾಯಧನ ನೀಡಲು ಮುಂದಾಗಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಸುನೀಲ್ ಗವಾಸ್ಕರ್ ಅವರ CHAMPS ಫೌಂಡೇಶನ್ ಕಾಂಬ್ಳಿಗೆ ಮಾಸಿಕ 30,000 ರೂ. ಹಣ ಮತ್ತು ವಾರ್ಷಿಕ 30,000 ರೂ.ಗಳ ವೈದ್ಯಕೀಯ ನೆರವನ್ನು ನೀಡಲಿದೆ.
ಜನವರಿಯಲ್ಲಿ ನಡೆದ ಮೈದಾನದ 50ನೇ ವಾರ್ಷಿಕೋತ್ಸವದ ವೇಳೆ ಗವಾಸ್ಕರ್ ಮತ್ತು ಕಾಂಬ್ಳಿ ವಾಂಖೆಡೆ ಕ್ರೀಡಾಂಗಣದಲ್ಲಿ ಭೇಟಿಯಾಗಿದ್ದರು.
ಕಾಂಬ್ಳಿಯವರ ಪತ್ನಿ ಆಂಡ್ರಿಯಾ ಹೆವಿಟ್ ಅವರು 2023ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ತಮ್ಮ ಪತಿಯ 'ಅಸಹಾಯಕ ಸ್ಥಿತಿಯನ್ನು' ನೋಡಿದ ನಂತರ ಅದನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿದರು.
'ನಾನು ಅವರನ್ನು ಬಿಟ್ಟರೆ ಅವರು ಅಸಹಾಯಕರಾಗಿರುತ್ತಾರೆ. ಅವರು ಮಗುವಿನಂತೆ ಮತ್ತು ಅದು ನನಗೆ ನೋವುಂಟು ಮಾಡುತ್ತದೆ. ಇದು ನನಗೆ ಚಿಂತೆಯಾಗಿತ್ತು. ನಾನು ಸ್ನೇಹಿತನನ್ನೇ ಬಿಡುವುದಿಲ್ಲ. ಆದರೆ, ಇವರು ಅದಕ್ಕಿಂತ ಹೆಚ್ಚಿನವರು. ನನ್ನ ಪಾಡಿಗೆ ನಾನಿದ್ದ ದಿನಗಳು ಇದ್ದವು. ಆದರೆ ನಂತರ ನಾನು ಚಿಂತೆಗೀಡಾಗುತ್ತಿದ್ದೆ. ಅವರು ಊಟ ಮಾಡಿದ್ದಾರೋ ಇಲ್ಲವೋ? ಚೆನ್ನಾಗಿದ್ದಾರೋ ಇಲ್ಲವೋ? ಎಂಬುದು ನನ್ನನ್ನು ಕಾಡುತ್ತಿತ್ತು. ಆಗ ನಾನು ಅವರನ್ನು ಪರಿಶೀಲಿಸಬೇಕಾಗಿತ್ತು ಮತ್ತು ಅವನಿಗೆ ನನ್ನ ಅಗತ್ಯವಿದೆ ಎಂದು ನನಗೆ ಅರ್ಥವಾಗುತ್ತಿತ್ತು' ಎಂದಿದ್ದಾರೆ.