ಭಾನುವಾರ ವಾಂಖೆಡೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಒಂಬತ್ತು ವಿಕೆಟ್‌ಗಳ ಸೋಲು ಕಂಡಿದ್ದು, ಪ್ಲೇಆಫ್ ಕನಸು ಕಷ್ಟಸಾಧ್ಯವಾಗಿದೆ. ಈ ಸೋಲಿನಿಂದಾಗಿ ಚೆನ್ನೈ ತಂಡವು ಪಾಯಿಂಟ್ ಟೇಬಲ್ಸ್‌ನಲ್ಲಿ ಕೊನೇಯ ಸ್ಥಾನದಲ್ಲಿ ಉಳಿದುಕೊಂಡಿದೆ. ಪ್ಲೇಆಫ್‌ಗೆ ಪ್ರವೇಶಿಸುವ ಸ್ಪರ್ಧೆಯಿಂದ ಹೊರಗುಳಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಈ ಆವೃತ್ತಿಯಲ್ಲಿ ಚೆನ್ನೈ ತಂಡದ ಕಳಪೆ ಪ್ರದರ್ಶನವು ಸಿಎಸ್‌ಕೆ ತಂಡದ ಹರಾಜು ತಂತ್ರವನ್ನು ಪ್ರಶ್ನಿಸುವಂತೆ ಮಾಡಿದೆ. ಸಿಎಸ್‌ಕೆ ಮಾಜಿ ಆಟಗಾರರು ಮತ್ತು ಭಾರತದ ದಂತಕಥೆಗಳಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರು ತಂಡದ ಹರಾಜು ತಂತ್ರವನ್ನು ಪ್ರಶ್ನಿಸಿದ್ದಾರೆ.
ಮುಂಬೈ ವಿರುದ್ಧದ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಲೈವ್‌ನಲ್ಲಿಯೇ ಮಾತನಾಡಿದ ರೈನಾ, ಕಳೆದ ನವೆಂಬರ್‌ನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಐದು ಬಾರಿಯ ಚಾಂಪಿಯನ್ ಆಗಿರುವ ತಂಡವು ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರತ್ತ ಗಮನ ಹರಿಸಲೇ ಇಲ್ಲ. ಹೀಗಾಗಿಯೇ, ಈ ಆವೃತ್ತಿಯಲ್ಲಿ ಹೋರಾಟ ಕೊಡುವಲ್ಲಿ ವಿಫಲವಾಗಿದೆ ಎಂದು ಹೇಳಿದರು.
'ಅವರಿಗೆ ಹರಾಜು ಪ್ರಕ್ರಿಯೆ ಉತ್ತಮವಾಗಿ ನಡೆದಿಲ್ಲ ಎಂದು ನನಗೆ ಅನಿಸುತ್ತಿದೆ. ಹರಾಜಿನಲ್ಲಿ ತುಂಬಾ ಪ್ರತಿಭಾನ್ವಿತ ಆಟಗಾರರು ಮತ್ತು ಯುವಕರು ಇದ್ದರು. ಈಗ ಅವರು ಎಲ್ಲಿದ್ದಾರೆ? ನೀವು ತುಂಬಾ ಹಣದೊಂದಿಗೆ ಹರಾಜಿಗೆ ಹೋಗಿದ್ದೀರಿ. ಆದರೆ ಪಂತ್, ಅಯ್ಯರ್ ಮತ್ತು ರಾಹುಲ್ ಅವರಂತಹ ಆಟಗಾರರನ್ನು ಬಿಟ್ಟು ಬಂದಿದ್ದೀರಿ. ಸಿಎಸ್‌ಕೆ ಈ ರೀತಿ ಕಳಪೆ ಪ್ರದರ್ಶನ ನೀಡುತ್ತಿರುವುದನ್ನು ನಾನು ಎಂದಿಗೂ ನೋಡಿಲ್ಲ' ಎಂದು ರೈನಾ ಹೇಳಿದರು.
ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಹರ್ಭಜನ್ ಕೂಡ ರೈನಾ ಅವರ ಮಾತಿಗೆ ಧ್ವನಿಯಾದರು. ಈ ಆವೃತ್ತಿಯಲ್ಲಿ ಸೋಲು ಕಾಣುತ್ತಿರುವುದಕ್ಕೆ ಸಿಎಸ್‌ಕೆ ತಂಡದ ಸ್ಕೌಟ್‌ಗಳೇ ಕಾರಣ ಎಂದು ದೂಷಿಸಿದರು.
ಸಿಎಸ್‌ಕೆ ದೊಡ್ಡ ತಂಡವಾಗಿದೆ. ಮೆಗಾ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಅವರಿಗಿತ್ತು. ತಂಡ ಆಯ್ಕೆ ಮಾಡಿರುವ ಯುವ ಪ್ರತಿಭೆಗಳು ಗೇಮ್-ಚೇಂಜರ್‌ಗಳಾಗಿ ಹೊರಹೊಮ್ಮಲಿಲ್ಲ. ಟ್ಯಾಲೆಂಟ್ ಸ್ಕೌಟ್‌ಗಳನ್ನು ಅವರ ಆದ್ಯತೆಗಳು ಮತ್ತು ಬದ್ಧತೆ ಬಗ್ಗೆ ಪ್ರಶ್ನಿಸಬೇಕು. ಏಕೆಂದರೆ, ತಂಡದ ಆಯ್ಕೆ ಅವರ ನಿರ್ಧಾರವನ್ನೇ ಆಧರಿಸಿತ್ತು' ಎಂದು ಹರ್ಭಜನ್ ಹೇಳಿದರು.
ಚೆನ್ನೈ ತಂಡವು ಇದೀಗ ತವರಿಗೆ ಪ್ರಯಾಣ ಬೆಳೆಸಲಿದ್ದು, ಏಪ್ರಿಲ್ 25ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮತ್ತು ಏಪ್ರಿಲ್ 30ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಸಿಎಸ್‌ಕೆ ತಂಡವು ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ, ಲೀಗ್ ಹಂತದ ಅಂತ್ಯದಲ್ಲಿ 16 ಅಂಕಗಳನ್ನು ಗಳಿಸಬೇಕಿದೆ. ಹೀಗಾಗಿ, ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಿರುವ ಅನಿವಾರ್ಯತೆಯಿದೆ. ಅಲ್ಲದೆ, ತಮ್ಮ ನೆಟ್ ರನ್ ರೇಟ್ ಅನ್ನು ಸುಧಾರಿಸಿಕೊಳ್ಳಲು ಉತ್ತಮ ಅಂತರದಿಂದಲೇ ಗೆಲುವು ಸಾಧಿಸಬೇಕಿದೆ.