ಲಂಡನ್: ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ನಿನ್ನೆ ನೈಟ್ ವಾಚ್ ಮನ್ ಆಗಿ ಕಣಕ್ಕಿಳಿದಿದ್ದ ಆಕಾಶ್ ದೀಪ್ ಅಕ್ಷರಶಃ ಇಂಗ್ಲೆಂಡ್ ಬೌಲರ್ ಗಳಿಗೆ ದುಃಸ್ವಪ್ನವಾಗಿ ಕಾಡಿದರು.
ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ವೇಗದ ಬೌಲರ್ ಆಕಾಶ್ ದೀಪ್ (Akash Deep) ಸ್ಮರಣೀಯ ಇನ್ನಿಂಗ್ಸ್ ಆಡಿ ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ.
2ನೇ ದಿನದಾಟದ ಅಂತ್ಯದ ವೇಳೆಗೆ ಕ್ರೀಸ್ ಗೆ ಆಗಮಿಸಿದ ಆಕಾಶ್ ದೀಪ್ ನಾಯಕ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದು ಮಾತ್ರವಲ್ಲದೇ ಭಾರತ ತಂಡವನ್ನು ಸಂಭಾವ್ಯ ಅಪಾಯದಿಂದ ಪಾರು ಮಾಡಿದ್ದಾರೆ.
ನೈಟ್ ವಾಚ್ ಮನ್ ಆಗಿ ಕ್ರೀಸ್ ಗೆ ಆಗಮಿಸಿದ ಆಕಾಶ್ ದೀಪ್ 3ನೇ ದಿನವೂ ಇಂಗ್ಲೆಂಡ್ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದರು. ಒಟ್ಟು 94 ಎಸೆತಗಳನ್ನು ಎದುರಿಸಿದ ಆಕಾಶ್ ದೀಪ್ 12 ಬೌಂಡರಿಗಳನ್ನು ಚಚ್ಚಿ 66 ರನ್ ಗಳಿಸಿ ಔಟಾದರು. ಆ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ಚೊಚ್ಚಲ ಅರ್ಧಶತಕ ಸಿಡಿಸಿದರು.
ಮಾತ್ರವಲ್ಲದೇ ಯಶಸ್ವಿ ಜೈಸ್ವಾಲ್ ಜೊತೆಗೂಡಿ ಭಾರತದ ಪರ ಬರೊಬ್ಬರಿ 107 ರನ್‌ಗಳ ಅಮೋಘ ಜೊತೆಯಾಟವಾಡಿದರು. ಈ ಪಂದ್ಯಕ್ಕೂ ಮೊದಲು, ಆಕಾಶ್ ದೀಪ್ ಅವರ ಟೆಸ್ಟ್ ಕ್ರಿಕೆಟ್‌ನ ಅತ್ಯುತ್ತಮ ಸ್ಕೋರ್ 31 ರನ್ ಆಗಿತ್ತು. ಇದೀಗ ಆಕಾಶ್ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಅರ್ಧಶತಕ ಸಿಡಿಸಿದ್ದಾರೆ. ಇಲ್ಲಿಯವರೆಗೆ ಟೀಂ ಇಂಡಿಯಾ ಪರ 10 ಪಂದ್ಯಗಳನ್ನು ಆಡಿರುವ ಅಕಾಶ್ ಬ್ಯಾಟಿಂಗ್ನಲ್ಲಿ 150 ರನ್ ಬಾರಿಸಿದರೆ, 27 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ಎಲೈಟ್ ಗ್ರೂಪ್ ಸೇರ್ಪಡೆ
ಇನ್ನು ಈ ಅರ್ಧಶತಕದೊಂದಿಗೆ ಆಕಾಶ್ ದೀಪ್, 2011 ರ ನಂತರ ನೈಟ್‌ವಾಚ್‌ಮನ್ ಆಗಿ ಐವತ್ತು ಪ್ಲಸ್ ರನ್ ಬಾರಿಸಿದ ಮೊದಲ ಭಾರತೀಯ ಆಟಗಾರನ ಎನಿಸಿಕೊಂಡಿದ್ದಾರೆ. ಆಕಾಶ್ಗೂ ಮೊದಲು, ಅಮಿತ್ ಮಿಶ್ರಾ 2011 ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ನೈಟ್‌ವಾಚ್‌ಮನ್ ಆಗಿ 84 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಅಮಿತ್ ನಂತರ, 14 ವರ್ಷಗಳ ಕಾಲ ಯಾವುದೇ ಭಾರತೀಯ ಆಟಗಾರನಿಗೆ ನೈಟ್‌ವಾಚ್‌ಮನ್ ಆಗಿ ಐವತ್ತು ಪ್ಲಸ್ ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಈಗ ಆಕಾಶ್ ದೀಪ್ ಈ ಅದ್ಭುತ ಸಾಧನೆ ಮಾಡಿದ್ದಾರೆ.
ಸಚಿನ್, ಕೊಹ್ಲಿ, ಗಿಲ್ ಇರುವ ಅಪರೂಪದ ಪಟ್ಟಿಗೆ ಆಕಾಶ್ ದೀಪ್ ಸೇರ್ಪಡೆ
ಅಂತೆಯೇ ಆಕಾಶ್ ದೀಪ್ ತಮ್ಮ ಈ ಅಮೋಘ ಅರ್ಧಶತಕದ ಮೂಲಕ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಶುಭ್ ಮನ್ ಗಿಲ್ ಇರುವ ಭಾರತದ ಸ್ಪೆಷಲಿಸ್ಟ್ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 21ನೇ ಶತಮಾನದಲ್ಲಿ ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ 4ನೇ ಕ್ರಮಾಂಕದಲ್ಲಿ ಬಂದು ಅರ್ಧಶತಕ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರರ ಪಟ್ಟಿಗೆ ಇದೀಗ ಆಕಾಶ್ ದೀಪ್ ಸೇರ್ಪಡೆಯಾಗಿದ್ದಾರೆ.
ಪೆವಿಲಿಯನ್ ನಲ್ಲಿ ಎದ್ದು ನಿಂತು ಚಪ್ಪಾಳ ತಟ್ಟಿದ ಆಟಗಾರರು
ಇನ್ನು ಆಕಾಶ್ ದೀಪ್ ರ ಈ ಅದ್ಭುತ ಇನ್ನಿಂಗ್ಸ್ ಗೆ ಮಾರುಹೋದ ತಂಡದ ಸಹ ಆಟಗಾರರು ಮತ್ತು ತಂಡದ ಕೋಚಿಂಗ್ ಸಿಬ್ಬಂದಿ ಆಕಾಶ್ ದೀಪ್ ಔಟಾಗಿ ಪೆವಿಲಿಯನ್ ಗೆ ಬರುತ್ತಲೇ ಎದ್ದು ನಿಂತು ಚಪ್ಪಾಳೆ ತಟ್ಟಿದರು. ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಆಕಾಶ್ ದೀಪ್ ರನ್ನು ತಬ್ಬಿಕೊಂಡು ತಮ್ಮ ಶ್ಲಾಘನೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.