8 ವರ್ಷಗಳ ನಂತರ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದ ಕನ್ನಡಿಗ ಕರುಣ್ ನಾಯರ್, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇಂಗ್ಲೆಂಡ್ ಪ್ರವಾಸದಲ್ಲಿನ ಅವರ ಪ್ರದರ್ಶನವು ಟೆಸ್ಟ್ ತಂಡಕ್ಕೆ ಮರಳಲು ಅವರು ತೋರಿಸಿದ ಹಸಿವನ್ನು ಪ್ರತಿಬಿಂಬಿಸಲಿಲ್ಲ. ನಾಯರ್ ಇಂಗ್ಲೆಂಡ್ ವಿರುದ್ಧದ ಐಧು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೇವಲ ಒಂದು ಅರ್ಧಶತಕ ಗಳಿಸಿದರು. ಅದು ಕೂಡ ಸರಣಿಯ ಕೊನೆಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ, ಎರಡನೇ ಇನಿಂಗ್ಸ್‌ನಲ್ಲಿ ಮತ್ತೊಂದು ನೀರಸ ಪ್ರದರ್ಶನ ನೀಡಿದರು. ಸರಣಿ ಈಗ ಮುಗಿದಿದ್ದು, ಅವರ ಟೆಸ್ಟ್ ಭವಿಷ್ಯದ ಮೇಲೆ ಅನುಮಾನಗಳು ವ್ಯಕ್ತವಾಗಿವೆ. ಓವಲ್‌ನಲ್ಲಿ ಗಳಿಸಿದ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಬೇಕಾಗಿತ್ತು ಎಂದು ಅನುಭವಿ ಬ್ಯಾಟ್ಸ್‌ಮನ್ ಸ್ವತಃ ಒಪ್ಪಿಕೊಂಡಿದ್ದು, ಹಾಗೆ ಮಾಡದಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದರು.
'ಓವಲ್‌ನಲ್ಲಿ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗದಿದ್ದಕ್ಕೆ ನಾನು ನಿರಾಶೆಗೊಂಡಿದ್ದೇನೆ. ಆದರೆ ಹಿಂತಿರುಗಿ ನೋಡಿದಾಗ, ಆ ಮೊದಲ ದಿನದಂದು ತಂಡವು ಕಠಿಣ ಸ್ಥಿತಿಯಲ್ಲಿದ್ದಾಗ ನಾನು ಉತ್ತಮ ಪ್ರದರ್ಶನ ನೀಡುವುದು ಬಹಳ ಮುಖ್ಯವಾಗಿತ್ತು. ಈ ಹಿಂದೆ ನಾನು ಅಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ; ಸರ್ರೆ ವಿರುದ್ಧ ನಾರ್ತಾಂಟ್ಸ್ ಪರ ನಾನು 150 ರನ್ ಗಳಿಸಿದ್ದೆ. ಅದನ್ನೇ ನಾನು ಈಗಲೂ ಮಾಡಲು ಆಶಿಸುತ್ತಿದ್ದೆ, ಆದರೆ ನನಗೆ ಸಾಧ್ಯವಾಗಲಿಲ್ಲ' ಎಂದು ಅವರು ESPNCricinfo ಜೊತೆಗಿನ ಚಾಟ್‌ನಲ್ಲಿ ಹೇಳಿದರು.
5 ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳ ನಡುವೆ ಸರಣಿ 2-2 ರಲ್ಲಿ ಮುಕ್ತಾಯಗೊಂಡಿತು.
'ಆ ಅರ್ಥದಲ್ಲಿ ಇದು ಏರಿಳಿತದ ಸರಣಿಯಾಗಿತ್ತು ಮತ್ತು ನಾನು ಬಹಳಷ್ಟು ಯೋಚಿಸಿದೆ. ಆದರೆ, ಏನಾಯಿತು ಎಂಬುದನ್ನು ಬಿಟ್ಟು ಮುಂದಿನ ಕೆಲವು ತಿಂಗಳುಗಳಲ್ಲಿ ನಾನು ಏನು ಮಾಡಬೇಕೆಂದು ನೋಡುವುದು ಸಹ ಮುಖ್ಯವಾಗಿದೆ. ಈಗ ನನ್ನ ಸಂಪೂರ್ಣ ಗಮನ ಆಡುವುದರ ಮೇಲೆ ಇಟ್ಟುಕೊಳ್ಳಬೇಕು ಮತ್ತು ಯಾವ ಕ್ರಮಾಂಕ ಎಂಬುದನ್ನು ಲೆಕ್ಕಿಸದೆ, ನಾನು ಮುಂದುವರಿಯುತ್ತೇನೆ ಮತ್ತು ದೊಡ್ಡ ಸ್ಕೋರ್‌ಗಳನ್ನು ಗಳಿಸುತ್ತೇನೆ ಎಂದು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸುತ್ತೇನೆ' ಎಂದು ಅವರು ಹೇಳಿದರು.
ನಾಯರ್ ಅವರ ಗಮನ ಈಗ ಮಹಾರಾಜ ಟ್ರೋಫಿಯತ್ತ ಹರಿದಿದೆ. ಮೈಸೂರು ವಾರಿಯರ್ಸ್ ತಂಡವು ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.