ಮಹಾರಾಜ T20 ಟ್ರೋಫಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಇಂದು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ತಂಡ 20 ಓವರ್ಗಳಲ್ಲಿ ಬರೋಬ್ಬರಿ 210 ರನ್ ಬಾರಿಸಿದ್ದು ಗುಲ್ಬರ್ಗಾಕ್ಕೆ ಗೆಲ್ಲಲು ಬೃಹತ್ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿದ ಗುಲ್ಬರ್ಗಾ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಲವ್ನಿತ್ ಸಿಸೋಡಿಯಾ ಇನ್ನಿಂಗ್ಸ್ನ ಮೊದಲ ಓವರ್ನಲ್ಲಿಯೇ ಮೈಸೂರು ತಂಡದ ಅನುಭವಿ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರ ಓವರ್ನಲ್ಲಿ ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು.
4ನೇ ಓವರ್ನಲ್ಲಿ ಗೌತಮ್ ಮಿಶ್ರಾ ಬೌಲಿಂಗ್ ನಲ್ಲಿ ಮನೀಶ್ ಪಾಂಡ್ಯಗೆ ಕ್ಯಾಚ್ ನೀಡಿ ಲವ್ನಿತ್ ಔಟಾದರು. ಇನ್ನು ಸಂಭ್ರಮಾಚರಣೆಯಲ್ಲಿ ಗೌತಮ್ ಮಿಶ್ರಾ ಲವ್ನಿತ್ ಹತ್ತಿರ ಬಂದು ಏನೇ ಹೇಳಿದರು. ಇದರಿಂದ ಕೆರಳಿದ ಲವ್ನಿತ್ ಕೋಪದಲ್ಲಿ ಗೌತಮ್ ಕಡೆ ಬ್ಯಾಟ್ ತೋರಿಸಿದ್ದು ಆಟಗಾರರ ನಡುವೆ ಜಗಳ ಕೂಡ ನಡೆಯಿತು.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೈಸೂರು ಮತ್ತು ಗುಲ್ಬರ್ಗಾ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 37 ರನ್ ಬಾರಿಸಿದ್ದ ಲವ್ನಿತ್ ಎದುರಾಳಿ ತಂಡಕ್ಕೆ ಸಿಂಹಸ್ವಪ್ನರಾಗಿದ್ದರು. ಆದರೆ ಲವ್ನಿತ್ ಅವರನ್ನು ಔಟ್ ಮಾಡುವ ಮೂಲಕ ಗೌತಮ್ ಮೈಸೂರು ತಂಡಕ್ಕೆ ಮೊದಲ ಬ್ರೇಕ್ ಥ್ರೂ ತಂದುಕೊಟ್ಟರು.