ರಾಯ್ಪುರ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋಲುವ ಮೂಲಕ ಭಾರತ ವಿಲಕ್ಷಣ ದಾಖಲೆಗೆ ಪಾತ್ರವಾಗಿದ್ದು, ಸತತ 20 ಏಕದಿನ ಪಂದ್ಯಗಳಲ್ಲಿ ಟಾಸ್ ಸೊತ ಜಗತ್ತಿನ ಮೊದಲ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಆ ಮೂಲಕ ಭಾರತಕ್ಕೆ ಮತ್ತೆ ಟಾಸ್ ಅದೃಷ್ಟ ಕೈ ಹಿಡಿಯಲಿಲ್ಲ. ಏಕದಿನ ಪಂದ್ಯಗಳಲ್ಲಿ ಭಾರತಕ್ಕೆ ಇದು ಸತತ 20ನೇ ಟಾಸ್ ಸೋಲಾಗಿದೆ.
ಕೆಎಲ್ ರಾಹುಲ್ ನಿರಾಶೆ
ಬುಧವಾರ ಭಾರತ ತಂಡದ ನಾಯಕ ಕೆಎಲ್ ರಾಹುಲ್ ನ್ಯಾಣವನ್ನು ಚಿಮ್ಮಿಸಿದರು. ಈ ವೇಳೆ ಆಫ್ರಿಕಾ ನಾಯಕ ಟೆಂಬಾ ಬವುಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಈ ವೇಳೆ ರಾಹುಲ್ ತಲೆಬಾಗಿ ತಮ್ಮ ನಿರಾಶೆ ವ್ಯಕ್ತಪಡಿಸಿದರು. ಬಳಿಕ ನಿರೂಪಕ ರವಿಶಾಸ್ತ್ರಿ ಜೊತೆ ಮಾತನಾಡಿದ ಕೆಎಲ್ ರಾಹುಲ್, 'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಬಹಳ ಸಮಯದಿಂದ ಟಾಸ್ ಗೆಲ್ಲದ ಕಾರಣ ನಾನು ಅನುಭವಿಸಿದ ಅತ್ಯಂತ ಒತ್ತಡ ಅದು. ನಾನು ಈಗ ಟಾಸ್ ಗೆಲ್ಲುವುದನ್ನು ಕೂಡ ಅಭ್ಯಾಸ ಮಾಡುತ್ತಿದ್ದೇನೆ, ಆದರೆ ಅದು ಕೆಲಸ ಮಾಡುತ್ತಿಲ್ಲ ಎಂಬುದು ಸ್ಪಷ್ಟ" ಎಂದು ನಗೆ ಚಟಾಕಿ ಹಾರಿಸಿದರು.
ಏಕದಿನ ಕ್ರಿಕೆಟ್‌ನಲ್ಲಿ ಭಾರತ ಟಾಸ್ ಸೋತಿದ್ದು ಇದು ಸತತ 20 ನೇ ಬಾರಿ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಕೊನೆಯ ಬಾರಿಗೆ ಟಾಸ್ ಗೆದ್ದಿತ್ತು. ಬಳಿಕ ನಡೆದ ಸತತ 20 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಭಾರತ ಟಾಸ್ ಗೆದ್ದಿಲ್ಲ.
ಗವಾಸ್ಕರ್ ಆಘಾತ
ಭಾರತದ ಈ ಪರಿಸ್ಥಿತಿ ತೀರಾ ಅಪರೂಪ ಎನ್ನಲಾಗಿದೆ. ಟಾಸ್ ಕುರಿತ ಅಂಕಿ ಅಂಶಗಳನ್ನು ಗಮನಿಸಿದ ಪಂದ್ಯ ವಿಶ್ಲೇಷಣೆ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಕೂಡ ಆಘಾತ ವ್ಯಕ್ತಪಡಿಸಿದ್ದಾರೆ. ಜಿಯೋಸ್ಟಾರ್ ಜೊತೆ ಮಾತನಾಡಿದ ಅವರು, "ರಾಹುಲ್ ಕೂಡ ಅದನ್ನ ವಿವರಿಸಿದ್ರು. ಅವರು ಅಭ್ಯಾಸ ಮಾಡ್ತಿದ್ದಾಗಿ ಹೇಳಿದ್ರು. ಆದರೆ ಎದುರಾಳಿ ತಂಡದ ನಾಯಕ ಏನು ಅಂತ ನಿಮಗೆ ಹೇಗೆ ಗೊತ್ತು?
ಏಕೆಂದರೆ, ಮೊದಲ ಪಂದ್ಯಕ್ಕೆ ಐಡೆನ್ ಮಾರ್ಕ್ರಾಮ್ ನಾಯಕರಾಗಿದ್ದರು. ಹಾಗಾಗಿ ಮಾರ್ಕ್ರಾಮ್ 'ಹೆಡ್ಸ್' ಆಯ್ಕೆ ಮಾಡಲು ಇಷ್ಟಪಡುವ ವ್ಯಕ್ತಿಯಾಗಿರಬಹುದು ಮತ್ತು ಟೆಂಬಾ ಬವುಮಾ 'ಟೈಲ್ಸ್' ಆಯ್ಕೆ ಮಾಡಲು ಇಷ್ಟಪಡುವ ನಾಯಕನಾಗಿರಬಹುದು. ಹಾಗಾದರೆ ನೀವು ಹೇಗೆ, ಹೇಗೆ ಪ್ರಯತ್ನಿಸುತ್ತೀರಿ, ನೀವು ಕುಶಲತೆಯಿಂದ ಆಡಲು ಬಯಸಿದ್ದರೂ ಸಹ?" ಎಂದು ಗವಾಸ್ಕರ್ ಕೂಡ ಹಾಸ್ಯ ಚಟಾಕಿ ಹಾರಿಸಿದರು.