ಭಾರತ ಕ್ರಿಕೆಟ್ ತಂಡದ ತಾರೆ ಪ್ರಸಿದ್ಧ್ ಕೃಷ್ಣ ರಾಯ್‌ಪುರದಲ್ಲಿ ನಡೆದ ಭಾರತ vs ದಕ್ಷಿಣ ಆಫ್ರಿಕಾ ಎರಡನೇ ಏಕದಿನ ಪಂದ್ಯದಲ್ಲಿ ಅತ್ಯಂತ ದುಬಾರಿ ಬೌಲರ್ ಆಗಿದ್ದರು. ದಕ್ಷಿಣ ಆಫ್ರಿಕಾಕ್ಕೆ 359 ರನ್‌ಗಳ ಬೃಹತ್ ಗುರಿಯನ್ನು ನೀಡಿದ್ದರೂ, ಆತಿಥೇಯರು ಪ್ರವಾಸಿ ತಂಡವನ್ನು ನಿಯಂತ್ರಿಸುವಲ್ಲಿ ವಿಫಲರಾದರು. ದಕ್ಷಿಣ ಆಫ್ರಿಕಾ ದಾಖಲೆಯ ಚೇಸಿಂಗ್‌ನಲ್ಲಿ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಸರಣಿ ಸಮಬಲ ಸಾಧಿಸಿತು. ಪಂದ್ಯದ ಸಮಯದಲ್ಲಿ ಪ್ರಸಿದ್ಧ್ ಕೃಷ್ಣ ಅವರು ನಾಯಕ ಕೆಎಲ್ ರಾಹುಲ್ ಅವರ ಕೋಪಕ್ಕೆ ಗುರಿಯಾಗಿದ್ದಾರೆ.
ಸ್ಟಂಪ್ ಮೈಕ್‌ನಲ್ಲಿ ಸೆರೆಯಾದ ಆಡಿಯೋದಲ್ಲಿ, ರಾಹುಲ್ ಪ್ರಸಿದ್ಧ್‌ಗೆ ನಿನ್ ತಲೆ ಓಡಿಸ್ಬೇಡ ಮತ್ತು ನಾನು ಏನು ಹೇಳುತ್ತೇನೋ ಅದನ್ನ ಮಾಡು ಸಾಕು ಎಂದು ಕೂಗುತ್ತಿರುವುದು ಕೇಳಿಸುತ್ತದೆ. ಪ್ರಸಿದ್ಧ ಕೃಷ್ಣ ಅವರು ದಕ್ಷಿಣ ಆಫ್ರಿಕಾದ ಟೋನಿ ಡಿ ಜೋರ್ಜಿ ಅವರಿಗೆ ಬೌಲಿಂಗ್ ಮಾಡುತ್ತಿದ್ದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಮೈದಾನದಲ್ಲಿ ಎಂದಿಗೂ ಈ ರೀತಿ ತಾಳ್ಮೆ ಕಳೆದುಕೊಳ್ಳದ ರಾಹುಲ್, ತಾನು ಹಾಗೆ ಮಾಡದಂತೆ ಹೇಳಿದ್ದರೂ ಸಹ, ಯೋಜನೆಗಳಿಂದ ವಿಮುಖನಾಗಿ ಬ್ಯಾಟರ್‌ನ ತಲೆಗೆ ಬೌಲಿಂಗ್ ಮಾಡಿದ್ದಕ್ಕಾಗಿ ಪ್ರಸಿದ್ಧ್ ಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ಪ್ರಸಿದ್ಧ್, ನಿನ್ನ ತಲೆ ಓಡ್ಸ್ಬೇಡ. ಹೇಳಿದ್ ಹಾಕು. ಹೇಳಿದಿನಿ ಎನ್ ಹಾಕ್ಬೇಕು ಅಂತ, ಅದನ್ನ ಹಾಕು' ಎಂದು ಕೆಎಲ್ ರಾಹುಲ್ ಪ್ರಸಿದ್ಧ್ ಕೃಷ್ಣ ಅವರಿಗೆ ಹೇಳುತ್ತಿರುವುದು ಮೈಕ್‌ನಲ್ಲಿ ಸೆರೆಯಾಗಿದೆ.
ಪ್ರಸಿದ್ಧ್ ಕೃಷ್ಣ ಅವರು ರಾಹುಲ್ ಅವರನ್ನು 'ತಲೆಗೆ ಹಾಕ್ಲಾ' ಎಂದು ಪ್ರಶ್ನಿಸಿದಾಗ ನಾಯಕ, 'ತಲೆಗೆಲ್ಲ ಬೇಡ ಈಗ ಪ್ರಸಿದ್ಧ್, ಹೇಳಿ ಬಂದಿದ್ದೀನಿ ತಲೆಗೆ ಹಾಕ್ತಿದ್ದೀಯಲ್ಲ ಮಗಾ' ಎಂದು ಹೇಳಿದ್ದಾರೆ.
ಪ್ರಸಿದ್ಧ್ ಕೃಷ್ಣ ಅವರು 8.2 ಓವರ್‌ಗಳಲ್ಲಿ 2/85 ರನ್ ನೀಡಿದರು. ಭಾರತ vs ದಕ್ಷಿಣ ಆಫ್ರಿಕಾ 2ನೇ ಏಕದಿನ ಪಂದ್ಯದಲ್ಲಿ 10.20 ಎಕಾನಮಿ ರೇಟ್‌ನಲ್ಲಿ ಅತ್ಯಂತ ದುಬಾರಿ ಭಾರತೀಯ ಬೌಲರ್ ಎನಿಸಿಕೊಂಡರು. ಈ ಪೈಕಿ ಅರ್ಶದೀಪ್ ಸಿಂಗ್ ಅತ್ಯುತ್ತಮ ಬೌಲರ್ ಎನಿಸಿಕೊಂಡರು. ಅವರು 2/54 ರನ್ ನೀಡಿದರು. ಆದರೂ, ಇದ್ಯಾವುದೂ ಭಾರತ ತಂಡದ ಗೆಲುವಿಗೆ ಸಾಕಾಗಲಿಲ್ಲ.