ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಶತಕ ಬಾರಿಸಿದರೂ ಎಂದರೆ ಭಾರತ ಪಂದ್ಯವನ್ನು ಗೆಲ್ಲುತ್ತದೆ ಎಂದರ್ಥ. ಅದೇ ರೀತಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದ್ದರು ಮತ್ತು ಭಾರತವು ಪಂದ್ಯವನ್ನು ಗೆದ್ದಿತ್ತು. ಆದರೆ, ಬುಧವಾರ ರಾಯ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿಯೂ 102 ರನ್ ಗಳಿಸುವ ಮೂಲಕ ಭಾರತ 358 ರನ್ ಕಲೆಹಾಕಲು ಕೊಹ್ಲಿ ನೆರವಾದರು. ಆದರೆ, ಅದನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಟೀಂ ಇಂಡಿಯಾ ಎಡವಿತು. ವಿರಾಟ್ ಕೊಹ್ಲಿ ಶತಕ ಗಳಿಸಿದ ಹೊರತಾಗಿಯೂ 7 ವರ್ಷಗಳಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಸೋಲು ಕಂಡಿತು.
2019ರ ಮಾರ್ಚ್‌ನಲ್ಲಿ ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿದರೂ ಭಾರತ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಸೋತಿತ್ತು. ಆ ಪಂದ್ಯದಲ್ಲಿ ಕೊಹ್ಲಿ 123 ರನ್ ಗಳಿಸಿದ್ದರು.
ವಿರಾಟ್ ಕೊಹ್ಲಿ ಶತಕ ಗಳಿಸಿದರೂ ಭಾರತ ಸೋತ ಸಂದರ್ಭಗಳು
ಇಂಗ್ಲೆಂಡ್ ವಿರುದ್ಧ 107, ಕಾರ್ಡಿಫ್ (ಸೆಪ್ಟೆಂಬರ್ 2011)
ನ್ಯೂಜಿಲೆಂಡ್ ವಿರುದ್ಧ 123, ನೇಪಿಯರ್ (ಜನವರಿ 2014)
ಆಸ್ಟ್ರೇಲಿಯಾ ವಿರುದ್ಧ 117, ಮೆಲ್ಬೋರ್ನ್ (ಜನವರಿ 2016)
ಆಸ್ಟ್ರೇಲಿಯಾ ವಿರುದ್ಧ 106, ಕ್ಯಾನ್‌ಬೆರಾ (ಜನವರಿ 2016)
ನ್ಯೂಜಿಲೆಂಡ್ ವಿರುದ್ಧ 121, ಮುಂಬೈ (ಅಕ್ಟೋಬರ್ 2017)
ವೆಸ್ಟ್ ಇಂಡೀಸ್ ವಿರುದ್ಧ 107, ಪುಣೆ (ಅಕ್ಟೋಬರ್ 2018)
ಆಸ್ಟ್ರೇಲಿಯಾ ವಿರುದ್ಧ 123, ರಾಂಚಿ (ಮಾರ್ಚ್ 2019)
ದಕ್ಷಿಣ ಆಫ್ರಿಕಾ ವಿರುದ್ಧ 102, ರಾಯ್‌ಪುರ (ಡಿಸೆಂಬರ್ 2025)
2019ರ ಮಾರ್ಚ್‌ನಲ್ಲಿ ನಡೆದ ಆ ಪಂದ್ಯದಿಂದ ರಾಯ್‌ಪುರದಲ್ಲಿ ನಡೆದ ಏಕದಿನ ಪಂದ್ಯದ ಹಿಂದಿನ ದಿನದವರೆಗೆ, ವಿರಾಟ್ ಕೊಹ್ಲಿ 55 ಇನಿಂಗ್ಸ್‌ಗಳಲ್ಲಿ 11 ಏಕದಿನ ಶತಕಗಳನ್ನು ಗಳಿಸಿದ್ದಾರೆ. 67.47 ರ ಸರಾಸರಿಯಲ್ಲಿ ಒಟ್ಟು 2,834 ರನ್ ಗಳಿಸಿದ್ದಾರೆ.
ಏಕದಿನ ಪಂದ್ಯಗಳಲ್ಲಿ, ವಿರಾಟ್ ಭಾರತದ ಸರ್ವಕಾಲಿಕ ಶ್ರೇಷ್ಠ ಪಂದ್ಯ ವಿಜೇತರಲ್ಲಿ ಒಬ್ಬರು. ಅವರ 53 ಏಕದಿನ ಶತಕಗಳಲ್ಲಿ 44 ಶತಕಗಳು ಭಾರತದ ಗೆಲುವಿಗೆ ಕಾರಣವಾಗಿವೆ. ಈ ಶತಕಗಳಲ್ಲಿ 24 ಚೇಸಿಂಗ್ ಸಮಯದಲ್ಲಿ ಬಂದಿವೆ. ಅವರು ಚೇಸ್ ಕಿಂಗ್ ಎಂದೇ ಹೆಸರಾಗಿದ್ದಾರೆ. 89.29 ಸರಾಸರಿಯಲ್ಲಿ 6,072 ರನ್ ಗಳಿಸಿದ್ದಾರೆ. ವಿರಾಟ್ ಗಳಿಸಿರುವ ಏಕದಿನ ಶತಕಗಳ ಪೈಕಿ ಕೇವಲ ಎಂಟು ಮಾತ್ರ ಸೋಲಿನ ಸಂದರ್ಭದಲ್ಲಿ ಬಂದಿವೆ ಮತ್ತು ಮತ್ತೊಂದು ಶತಕ ಗಳಿಸಿದ ಪಂದ್ಯದಲ್ಲಿ ಫಲಿತಾಂಶ ಲಭ್ಯವಾಗಿಲ್ಲ.
ಈ ವರ್ಷ 12 ಏಕದಿನ ಪಂದ್ಯಗಳಲ್ಲಿ ವಿರಾಟ್ 12 ಇನಿಂಗ್ಸ್‌ಗಳಲ್ಲಿ 58.60 ಸರಾಸರಿಯಲ್ಲಿ 586 ರನ್ ಗಳಿಸಿದ್ದಾರೆ. 92.72 ಸ್ಟ್ರೈಕ್ ರೇಟ್‌ನಲ್ಲಿ ಮೂರು ಶತಕಗಳು, ಮೂರು ಅರ್ಧಶತಕಗಳು ಮತ್ತು 135 ಅವರ ಅತ್ಯುತ್ತಮ ಸ್ಕೋರ್ ಆಗಿದೆ.