ವಿಶಾಖಪಟ್ಟಣಂ: ಭಾರತ ಕ್ರಿಕೆಟ್ ತಂಡಕ್ಕೆ ಕಳೆದ 2 ವರ್ಷಗಳಿಂದ ಮರೀಚಿಕೆಗೆಯಾಗಿದ್ದ ಟಾಸ್ ಗೆಲುವು ಕೊನೆಗೂ ವಿಶಾಖಪಟ್ಟಣಂನಲ್ಲಿ ಕೈ ಹಿಡಿದಿದ್ದು, ಸತತ 20 ಪಂದ್ಯಗಳ ಬಳಿಕ ಭಾರಕ ತಂಡದ ನಾಯಕ ಟಾಸ್ ಗೆದ್ದಿದ್ದಾರೆ.
ಹೌದು.. ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಣಗದಲ್ಲಿ ಆರಂಭವಾಗಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿದ್ದು, ಆ ಮೂಲಕ ಕುಖ್ಯಾತ ದಾಖಲೆಯೊಂದಕ್ಕೆ ಎಳ್ಳುನೀರು ಬಿಟ್ಟಿದೆ.
ಬರೋಬ್ಬರಿ 2 ವರ್ಷಗಳ ಬಳಿಕ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ನಲ್ಲಿ ಟಾಸ್ ಗೆದ್ದಿದೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಕೆಎಲ್ ರಾಹುಲ್ ಟಾಸ್ ಗೆದ್ದಿದ್ದಾರೆ. ಈ ಮೂಲಕ 20 ಪಂದ್ಯಗಳ ಸುದೀರ್ಘ ಟಾಸ್ ಫೇಲ್ಗೆ ಬ್ರೇಕ್ ಹಾಕಿದ್ದಾರೆ.
ಟಾಸ್ ಸೋಲಿನಲ್ಲಿ ದಾಖಲೆಯನ್ನೇ ಬರೆದಿದ್ದ ಭಾರತ
ಇನ್ನು ಭಾರತದ ಟಾಸ್ ವಿಚಾರ ಯಾವ ಮಟ್ಟಿಗೆ ಸುದ್ದಿಯಾಗಿತ್ತು ಎಂದರೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಇದೂ ಅತ್ಯಪರೂಪದ ದಾಖಲೆಯೂ ಆಗಿತ್ತು. ಜಗತ್ತಿನ ಯಾವುದೇ ತಂಡವೂ ಕೂಡ ಸತತ 20 ಪಂದ್ಯಗಳಲ್ಲಿ ಟಾಸ್ ಸೋತಿರಲಿಲ್ಲ. ಇದೂ ಕ್ರಿಕೆಟ್ ಇತಿಹಾಸದ ಅತ್ಯಪರೂಪದ ದಾಖಲೆ ಎಂದು ಹೇಳಲಾಗಿತ್ತು.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟಾಸ್ ಗೆದ್ದಿದ್ದ ಭಾರತ
ಇನ್ನು ಟೀಮ್ ಇಂಡಿಯಾ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿದ್ದು ನವೆಂಬರ್ 15, 2023 ರಲ್ಲಿ. ಅದು ಕೂಡ 2023ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ. ಅಂದು ನ್ಯೂಝಿಲೆಂಡ್ ವಿರುದ್ಧ ರೋಹಿತ್ ಶರ್ಮಾ ಟಾಸ್ ಗೆದ್ದಿದ್ದರು. ಇದಾದ ಬಳಿಕ ಭಾರತ ತಂಡವು ಬರೋಬ್ಬರಿ 20 ಏಕದಿನ ಪಂದ್ಯಗಳನ್ನಾಡಿದೆ. ಈ ಇಪ್ಪತ್ತು ಮ್ಯಾಚ್ಗಳಲ್ಲೂ ಭಾರತ ತಂಡ ಟಾಸ್ ಸೋತಿತ್ತು.
ಕುಖ್ಯಾತ ದಾಖಲೆಗೆ ಬ್ರೇಕ್ ಹಾಕಿದ ಕೆಎಲ್ ರಾಹುಲ್!
ಸತತ 20 ಪಂದ್ಯಗಳಲ್ಲಿ ಟಾಸ್ ಸೋತಿದ್ದ ಭಾರತಕ್ಕೆ ಇದೀಗ 21ನೇ ಪಂದ್ಯದಲ್ಲಿ ಅದೃಷ್ಟ ಕೈ ಹಿಡಿದಂತಿದೆ. 21ನೇ ಪಂದ್ಯದಲ್ಲಿ ಕೆಎಲ್ ರಾಹುಲ್ಗೆ ಅದೃಷ್ಟ ಖುಲಾಯಿಸಿದ್ದು, ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿದೆ.
ತಂಡಗಳು ಇಂತಿವೆ
ಭಾರತ: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಕೆಎಲ್ ರಾಹುಲ್ (ನಾಯಕ), ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಯಾನ್ ರಿಕೆಲ್ಟನ್, ಐಡೆನ್ ಮಾರ್ಕ್ರಾಮ್ , ಮ್ಯಾಥ್ಯೂ ಬ್ರೀಟ್ಝ್ಕೆ, ಡೆವಾಲ್ಡ್ ಬ್ರೆವಿಸ್, ಮಾರ್ಕೊ ಯಾನ್ಸೆನ್, ಕಾರ್ಬಿನ್ ಬಾಷ್, ಲುಂಗಿ ಎನ್ಗಿಡಿ, ಕೇಶವ್ ಮಹಾರಾಜ್, ಒಟ್ನೀಲ್ ಬಾರ್ಟ್‌ಮ್ಯಾನ್.