ಧರ್ಮಶಾಲಾ: ಭಾರತ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ ಓವರ್ ನಲ್ಲಿ 117 ರನ್ ಗಳಿಗೆ ಆಲೌಟ್ ಆಗಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು.
ಇನ್ನು ದಕ್ಷಿಣ ಆಫ್ರಿಕಾ ಆರಂಭಿಕ ಬ್ಯಾಟಿಂಗ್ ಕಳಪೆಯಾಗಿತ್ತು. ಟೀಂ ಇಂಡಿಯಾ ಬೌಲರ್ ಗಳು ಅದ್ಭುತ ಬ್ಯಾಟಿಂಗ್ ಮಾಡಿದ್ದು 7 ರನ್ ಗಳಿಗೆ ಆರಂಭಿಕ ಮೂರು ವಿಕೆಟ್ ಕಳೆದುಕೊಂಡು ಆಫ್ರಿಕಾ ಸಂಕಷ್ಟಕ್ಕೆ ಸಿಲುಕಿತು. ಐಡೆನ್ ಮಾರ್ಕ್ರಾಮ್ ಅರ್ಧಶತಕ ಬಾರಿಸುವ ಮೂಲಕ ತಂಡ 100 ರನ್ ಗಡಿ ತಲುಪಲು ಸಾಧ್ಯವಾಯಿತು. ಮಾರ್ಕ್ರಾಮ್ 61 ರನ್ ಗಳಿಸಿದ್ದು ತಂಡದ ಅತ್ಯಧಿಕ ಮೊತ್ತವಾಗಿದೆ. ಇನ್ನುಳಿದಂತೆ ಫೆರೀರಾ 20 ರನ್ ಗಳಿಸಿದ್ದು ತಂಡದ ಎರಡನೇ ಅತ್ಯಧಿಕ ಸ್ಕೋರ್ ಆಗಿದೆ.
ಭಾರತದ ಪರ ಬೌಲಿಂಗ್ ನಲ್ಲಿ ಅರ್ಶ್ ದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ತಲಾ 1 ವಿಕೆಟ್ ಪಡೆದರು.
5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು ಸಮಬಲ ಸಾಧಿಸಿದ್ದು, ಸರಣಿ ಮೇಲೆ ಹಿಡಿತ ಸಾಧಿಸಲು ಈ ಪಂದ್ಯದ ಗೆಲುವು ಉಭಯ ತಂಡಗಳಿಗೆ ಪ್ರಮುಖವಾಗಿವೆ.