ದುಬೈನಲ್ಲಿ ನಡೆದ U-19 ಏಷ್ಯಾ ಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಭಾರತದ U-19 ತಂಡವು ಶ್ರೀಲಂಕಾ U-19 ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಭರ್ಜರಿ ಗೆಲುವು ಸಾಧಿಸಿತು. ಮಳೆಯಿಂದಾಗಿ ಐದು ಗಂಟೆ ತಡವಾಗಿ ಆರಂಭವಾದ ಪಂದ್ಯವನ್ನು 20 ಓವರ್‌ಗಳಿಗೆ ಇಳಿಸಲಾಗಿತ್ತು. ಪಂದ್ಯದಲ್ಲಿ ಭಾರತವು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾವನ್ನು 8 ವಿಕೆಟ್‌ಗಳಿಗೆ 138 ಸ್ಕೋರ್‌ಗೆ ಸೀಮಿತಗೊಳಿಸಿತು.
ಭಾರತ ತಂಡದ ನಾಯಕ ಆಯುಷ್ ಮ್ಹಾತ್ರೆ ಮತ್ತು 14 ವರ್ಷದ ವೈಭವ್ ಸೂರ್ಯವಂಶಿ ಅವರ ವಿಕೆಟ್‌ಗಳನ್ನು ಆರಂಭದಲ್ಲೇ ಕಳೆದುಕೊಂಡಿತು. ಆದರೆ, ವಿಹಾನ್ ಮಲ್ಹೋತ್ರಾ ಮತ್ತು ಆರನ್ ಜಾರ್ಜ್ ಅವರ ಅರ್ಧಶತಕಗಳ ನೆರವಿನಿಂದಾಗಿ ಭಾರತವು 139 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ನೆರವಾಯಿತು.
ಶ್ರೀಲಂಕಾ ನೀಡಿದ ಗುರಿ ಬೆನ್ನಟ್ಟಿದ ಭಾರತದ ಉಪನಾಯಕ ವಿಹಾನ್ ಮಲ್ಹೋತ್ರಾ 45 ಎಸೆತಗಳಲ್ಲಿ ಅಜೇಯ 61 ರನ್ ಗಳಿಸಿದರು. ಅವರಿಗೆ ಆರನ್ ಜಾರ್ಜ್ ಅವರಿಂದ ಉತ್ತಮ ಬೆಂಬಲ ದೊರೆಯಿತು. ಅವರು ಅಜೇಯ 58 ರನ್ ಗಳಿಸಿದರು. ಈ ಜೋಡಿಯು 114 ರನ್‌ಗಳ ಜೊತೆಯಾಟ ನಡೆಸಿ ಭಾರತವನ್ನು 18 ಓವರ್‌ಗಳಲ್ಲಿ ಆರಾಮವಾಗಿ ಗೆಲುವಿನ ದಡ ಸೇರಿಸಿತು.
ಐಪಿಎಲ್ 2026ರ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಇಬ್ಬರು ಆಟಗಾರರಾದ ವಿಹಾನ್ ಮಲ್ಹೋತ್ರಾ (61*) ಮತ್ತು ಕನಿಷ್ಕ್ ಚೌಹಾಣ್ (ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ಗಳು) ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಮತ್ತೊಂದೆಡೆ ಎರಡನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ನಂತರ ಪಾಕಿಸ್ತಾನವು, ಭಾನುವಾರ ನಡೆಯಲಿರುವ U-19 ಏಷ್ಯಾ ಕಪ್‌ನ ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ.
ಭಾರತವು ಪಂದ್ಯಾವಳಿಯ ಉದ್ದಕ್ಕೂ ಅಜೇಯವಾಗಿ ಮುಂದುವರೆದಿದೆ. ಆದರೆ, ಪಾಕಿಸ್ತಾನ ತಂಡವು ಗುಂಪು ಹಂತದಲ್ಲಿ ಮೆನ್ ಇನ್ ಬ್ಲೂ ವಿರುದ್ಧ ಮಾತ್ರ ಸೋಲು ಕಂಡಿದೆ. 11 ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನ U-19 ಏಷ್ಯಾ ಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. 2014ರಲ್ಲಿ ಕೊನೆಯ ಬಾರಿಗೆ ಈ ಮುಖಾಮುಖಿ ನಡೆದಿತ್ತು. ಆಗ ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ಸಂಜು ಸ್ಯಾಮ್ಸನ್ ಮತ್ತು ಕುಲದೀಪ್ ಯಾದವ್ ಅವರಂತಹ ಭವಿಷ್ಯದ ಅಂತರರಾಷ್ಟ್ರೀಯ ಆಟಗಾರರನ್ನು ಒಳಗೊಂಡ ತಂಡದೊಂದಿಗೆ ಭಾರತ ಟ್ರೋಫಿಯನ್ನು ಎತ್ತಿಹಿಡಿಯಿತು.
ಭಾರತ vs ಪಾಕಿಸ್ತಾನ, ಅಂಡರ್-19 ಏಷ್ಯಾ ಕಪ್ ಪಂದ್ಯವು ಡಿಸೆಂಬರ್ 21ರಂದು ದುಬೈನ ಐಸಿಸಿ ಅಕಾಡೆಮಿಯಲ್ಲಿ ನಡೆಯಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಸೋನಿ ಲಿವ್‌ನಲ್ಲಿ ನೇರಪ್ರಸಾರವಾಗಲಿದೆ.