ಟೀಂ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ಅವರ ಪತ್ನಿ ಮಿತ್ತಾಲಿ ಪರುಲ್ಕರ್ ಗಂಡು ಮಗುವಿನ ಪೋಷಕರಾಗುವ ಮೂವಕ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಕ್ರಿಕೆಟಿಗ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮೂಲಕ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಒಂಬತ್ತು ತಿಂಗಳಿನಿಂದ ಖಾಸಗಿಯಾಗಿಟ್ಟುಕೊಂಡಿದ್ದ ಶಾರ್ದೂಲ್, ತಮ್ಮ ಮೊದಲ ಮಗುವಿನ ಆಗಮನವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದರು.
'ಹೆತ್ತವರ ಹೃದಯಗಳು ಮೌನ, ನಂಬಿಕೆ ಮತ್ತು ಅಂತ್ಯವಿಲ್ಲದ ಪ್ರೀತಿಯಿಂದ ರಕ್ಷಿಸಲ್ಪಟ್ಟಿದೆ. ನಮ್ಮ ಪುಟ್ಟ ರಹಸ್ಯವು ಅಂತಿಮವಾಗಿ ಇಲ್ಲಿದೆ. ಸ್ವಾಗತ, ಗಂಡು ಮಗು - ನಾವು 9 ತಿಂಗಳು ಸದ್ದಿಲ್ಲದೆ ಕಂಡ ಸುಂದರ ಕನಸು' ಎಂದು ಬರೆದಿದ್ದು, 'ನಮಗೆ ಗಂಡು ಮಗು ಜನಿಸಿದೆ!' ಎಂದು ಬರೆದಿರುವ ಪೋಸ್ಟರ್ ಕೂಡ ಇದೆ.
ಅಭಿಮಾನಿಗಳು ಮತ್ತು ಕ್ರಿಕೆಟ್ ವಲಯದ ಸದಸ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು, ಈ ವಿಶೇಷ ಸಂದರ್ಭದಲ್ಲಿ ಅನೇಕರು ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಹ ಆಟಗಾರ ದೀಪಕ್ ಚಾಹರ್ 'ಅಭಿನಂದನೆಗಳು' ಎಂದು ಕಮೆಂಟ್ ಮಾಡಿದ್ದಾರೆ. ಈಮಧ್ಯೆ, ಧನಶ್ರೀ ವರ್ಮಾ ಮತ್ತು CSK ಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕೂಡ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ.
ಶಾರ್ದೂಲ್ ಮತ್ತು ಮಿತ್ತಾಲಿ 2021ರ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು 2023ರ ಫೆಬ್ರುವರಿ 28 ರಂದು ವಿವಾಹವಾದರು. ಕೊಲ್ಲಾಪುರದವರಾದ ಮಿತ್ತಾಲಿ ವೃತ್ತಿಪರ ಬೇಕರ್. ಮದುವೆಯಾದಾಗಿನಿಂದ, ದಂಪತಿ ತಮ್ಮ ವೈಯಕ್ತಿಕ ಜೀವನವನ್ನು ಹೆಚ್ಚಾಗಿ ಸಾರ್ವಜನಿಕರಿಂದ ದೂರವಿಟ್ಟಿದ್ದಾರೆ. ಆದಾಗ್ಯೂ, ಇತ್ತೀಚೆಗೆ, ಡಿಸೆಂಬರ್ 11 ರಂದು, ಶಾರ್ದೂಲ್ ತಮ್ಮ ಪತ್ನಿಯ ಹುಟ್ಟುಹಬ್ಬದಂದು ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.
ಐಪಿಎಲ್ 2026ಕ್ಕೂ ಮೊದಲು ಲಕ್ನೋ ಸೂಪರ್ ಜೈಂಟ್ಸ್‌ನಿಂದ ಟ್ರೇಡ್ ಆದ ನಂತರ ಠಾಕೂರ್ ಇತ್ತೀಚೆಗೆ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದಾರೆ. 105 ಐಪಿಎಲ್ ಪಂದ್ಯಗಳಲ್ಲಿ, ಅವರು 107 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಕೆಳ ಕ್ರಮಾಂಕದಲ್ಲಿ ಅಮೂಲ್ಯವಾದ ರನ್‌ಗಳನ್ನು ಗಳಿಸಿದ್ದಾರೆ. ವಿಶ್ವಾಸಾರ್ಹ ಸೀಮ್-ಬೌಲಿಂಗ್ ಆಲ್‌ರೌಂಡರ್ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ಭಾರತೀಯ ವೇಗದ ಘಟಕವನ್ನು ಬಲಪಡಿಸಲು ಮುಂಬೈಗೆ ಠಾಕೂರ್ ಅವರಂತಹ ವ್ಯಕ್ತಿಯ ಅಗತ್ಯವಿತ್ತು. ವಾಂಖೆಡೆ ಕ್ರೀಡಾಂಗಣದೊಂದಿಗಿನ ಅವರ ಪರಿಚಿತತೆಯೂ ದೊಡ್ಡ ಪ್ಲಸ್ ಆಗಿದೆ.
ಐಪಿಎಲ್‌ನಿಂದ ದೂರವಿದ್ದರೂ, ಠಾಕೂರ್ ದೇಶೀಯ ಕ್ರಿಕೆಟ್‌ನಲ್ಲಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅವರು ಸದ್ಯ ಮೂರು ಸ್ವರೂಪಗಳಲ್ಲಿ ಮುಂಬೈ ತಂಡದ ನಾಯಕರಾಗಿದ್ದಾರೆ. ಅವರು ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದರು ಮತ್ತು ಡಿಸೆಂಬರ್ 24 ರಿಂದ ಪ್ರಾರಂಭವಾಗುವ ಮುಂಬರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.