ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆ ಅಭಿಮಾನಿಯೊಬ್ಬರು ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗುತ್ತಿದೆ. ಕ್ರಿಸ್‌ಮಸ್ ದಿನದ ಸಂಜೆ ರೆಸ್ಟೋರೆಂಟ್‌ನ ಹೊರಗೆ ಆಟಗಾರ ತನ್ನ ಗೆಳತಿ ಮಹೀಕಾ ಶರ್ಮಾ ಜೊತೆ ಕಾಣಿಸಿಕೊಂಡಿದ್ದರು. ಹಾರ್ದಿಕ್ ಮೊದಲು ಮಹೀಕಾ ಅವರನ್ನು ಕಾರಿನಲ್ಲಿ ಕೂರಿಸಿದರು ಮತ್ತು ನಂತರ ಕೆಲವು ಅಭಿಮಾನಿಗಳು ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ನೀಡಿದರು.
ಹಾರ್ದಿಕ್ ಸ್ಥಳದಿಂದ ಹೊರಡಲು ಪ್ರಯತ್ನಿಸುತ್ತಿದ್ದಂತೆ, ಅಭಿಮಾನಿಗಳು ಸೆಲ್ಫಿಗಳಿಗಾಗಿ ವಿನಂತಿ ಮಾಡಿದ್ದಾರೆ. ಆಗ ಹಾರ್ದಿಕ್, 'ಲೇ ತೋ ಲಿಯಾ, ಔರ್ ಕಿತ್ನಾ ಲೆಗಾ? (ನೀವು ಈಗಾಗಲೇ ಚಿತ್ರಗಳನ್ನು ತೆಗೆದುಕೊಂಡಿದ್ದೀರಿ. ನಿಮಗೆ ಇನ್ನೂ ಎಷ್ಟು ಬೇಕು?)' ಎಂದು ಪ್ರಶ್ನಿಸುತ್ತಾರೆ. ಆಗ ಅಭಿಮಾನಿಯೊಬ್ಬರು 'ಭಾದ್ ಮೇ ಜಾ (ನರಕಕ್ಕೆ ಹೋಗು)' ಎಂದು ಹೇಳಿದ್ದಾರೆ. ಆಗ ಪ್ರಬುದ್ಧತೆಯನ್ನು ತೋರಿಸಿದ ಹಾರ್ದಿಕ್, ಆ ಕಾಮೆಂಟ್‌ಗೆ ಪ್ರತಿಕ್ರಿಯಿಸಿಲ್ಲ. ಇದು ವಿಡಿಯೋದಲ್ಲಿ ಸೆರೆಯಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ T20I ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಭಾಗವಹಿಸಿದ್ದರು. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತು.
ಸರಣಿಯ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಹಾರ್ದಿಕ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಮೂಲಕ ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ವೇಗದ ಅರ್ಧಶತಕ ಗಳಿಸಿದರು. 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆಯನ್ನು ದಂತಕಥೆ ಯುವರಾಜ್ ಸಿಂಗ್ ಹೊಂದಿದ್ದಾರೆ.
ಭಾರತ ಪರ ಟಿ20ಐ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಮತ್ತು ಕನಿಷ್ಠ ಒಂದು ವಿಕೆಟ್ ಪಡೆದ ಅತಿ ಹೆಚ್ಚು ಸಂದರ್ಭಗಳಲ್ಲಿ ಹಾರ್ದಿಕ್ ಯುವರಾಜ್ ಅವರನ್ನು ಹಿಂದಿಕ್ಕಿದರು. ಐದನೇ ಟಿ20ಐನಲ್ಲಿ ಅವರು ಕೇವಲ 25 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 63 ರನ್ ಗಳಿಸಿದರು. ಅವರ ರನ್‌ಗಳು 252 ಸ್ಟ್ರೈಕ್ ರೇಟ್‌ನಲ್ಲಿ ಬಂದವು. ಬೌಲಿಂಗ್ ಮಾಡುವಾಗ, ಹಾರ್ದಿಕ್ ಮೂರು ಓವರ್‌ಗಳಲ್ಲಿ 41 ರನ್‌ಗಳನ್ನು ಬಿಟ್ಟುಕೊಟ್ಟರು. ಆದರೆ, ಡೆವಾಲ್ಡ್ ಬ್ರೆವಿಸ್ ಅವರ ಅಮೂಲ್ಯ ವಿಕೆಟ್ ಪಡೆದರು.
ಈಗ, ಹಾರ್ದಿಕ್ ಭಾರತ ಪರ ಟಿ20ಐ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಮತ್ತು ಕನಿಷ್ಠ ಒಂದು ವಿಕೆಟ್ ಪಡೆದ ನಾಲ್ಕು ನಿದರ್ಶನಗಳನ್ನು ಹೊಂದಿದ್ದಾರೆ. ಯುವರಾಜ್ ಸಿಂಗ್ ಅವರಿಗಿಂತ ಒಂದು ಹೆಚ್ಚಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದ ಹಾರ್ದಿಕ್, ಟಿ20ಐ ಸರಣಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಮೂರು ಇನಿಂಗ್ಸ್‌ಗಳಲ್ಲಿ 71 ಸರಾಸರಿ ಮತ್ತು 186.84 ಸ್ಟ್ರೈಕ್ ರೇಟ್‌ನಲ್ಲಿ 142 ರನ್ ಗಳಿಸಿದರು. ಅವರು ಎರಡು ಅರ್ಧಶತಕಗಳನ್ನು ಗಳಿಸಿದರು. ಇದಲ್ಲದೆ, ಹಾರ್ದಿಕ್ ಮೂರು ವಿಕೆಟ್‌ಗಳನ್ನು ಸಹ ಪಡೆದರು.