ಚಾಂಪಿಯನ್ ಟ್ರೋಫಿ ಬಳಿಕ ಟೀಂ ಇಂಡಿಯಾದ ನಾಯಕನ ಹುದ್ದೆಯಿಂದ ರೋಹಿತ್ ಶರ್ಮಾ ಕೆಳಗಿಳಿಯಲಿದ್ದಾರೆ ಎನ್ನುವ ವಿಚಾರ ಈಗಾಗಲೇ ಸುದ್ದಿಯಲ್ಲಿದ್ದು, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಶೀಘ್ರದಲ್ಲೇ ಭಾರತ ತಂಡದ ನಾಯಕನಾಗಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ನಾಯಕನ ಅನುಪಸ್ಥಿತಿಯಲ್ಲಿ ಹಾರ್ಧಿಕ್ ಪಾಂಡ್ಯ ಅನೇಕ ಸರಣಿಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ, ಕಳೆದ ವರ್ಷ ಭಾರತ ಟಿ20 ವಿಶ್ವಕಪ್ ಗೆದ್ದ ನಂತರ ಬಿಸಿಸಿಐ ಸೂರ್ಯಕುಮಾರ್ ಯಾದವ್ ಅವರನ್ನು ಭಾರತದ ಪೂರ್ಣಾವಧಿ ಟಿ20 ನಾಯಕರನಾಗಿ ನೇಮಿಸಿತ್ತು. ಇದರ ಜೊತೆಗೆ, ಯುವ ಬ್ಯಾಟರ್ ಶುಭಮನ್ ಗಿಲ್ ಅವರಿಗೆ ODIಗಳಲ್ಲಿ ಉಪನಾಯಕನನ್ನಾಗಿ ಮಾಡಲಾಗಿತ್ತು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಯಿತು.
ದೈನಿಕ್ ಜಾಗರಣ್ ವರದಿ ಪ್ರಕಾರ, ಮುಂಬರುವ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲು ತಂಡವು ವಿಫಲವಾದರೆ ಹಾರ್ದಿಕ್ ಪಾಂಡ್ಯ ಅವರಿಗೆ ಟೀಂ ಇಂಡಿಯಾದ ನಾಯಕತ್ವವನ್ನು ನೀಡಲಾಗುತ್ತದೆ ಎನ್ನಲಾಗಿದೆ.
'ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಹಾರ್ದಿಕ್ ಪಾಂಡ್ಯ ಉಪನಾಯಕನಾಗಬೇಕೆಂದು ಬಯಸಿದ್ದರು. ಆದರೆ, ರೋಹಿತ್ ಶರ್ಮಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದರು' ಎಂದು ವರದಿ ತಿಳಿಸಿದೆ.
ಸದ್ಯ ಟಿ20 ನಾಯಕರಾಗಿರುವ ಸೂರ್ಯಕುಮಾರ್ ಯಾದವ್ ಅವರು ಫಾರ್ಮ್ ಕಳೆದುಕೊಳ್ಳುತ್ತಿದ್ದು, ಟಿ20ಗಳಲ್ಲಿ ನಾಯಕತ್ವವನ್ನು ಮರಳಿ ಪಡೆಯಲು ಹಾರ್ಧಿಕ್ ಅವರಿಗೆ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.
ಹಾರ್ದಿಕ್ ಕಳೆದ ವರ್ಷ T20 ವಿಶ್ವಕಪ್‌ನಲ್ಲಿ ರೋಹಿತ್‌ಗೆ ಉಪನಾಯಕರಾಗಿದ್ದರು, ಆದರೆ, ಫಿಟ್‌ನೆಸ್ ಕಾರಣದಿಂದಾಗಿ ಅವರು ನಾಯಕನ ಪಾತ್ರದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ.
ನಾಯಕತ್ವದ ವಿಚಾರದಲ್ಲಿ ಈ ಹಿಂದೆ ಹಾರ್ಧಿಕ್ ಪಾಂಡ್ಯ ಅವರಿಗೆ ಸಾಕಷ್ಟು ಹಿನ್ನಡೆಯಾಗಿದೆ. ಫಿಟ್‌ನೆಸ್ ಸಮಸ್ಯೆಗಳಿಂದ ಅವರು ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಆದರೆ, ಅವರ ಫಾರ್ಮ್ ಉತ್ತಮವಾಗಿದೆ ಎಂದು ಕೆಲವು ಬಿಸಿಸಿಐ ಮಧ್ಯಸ್ಥಗಾರರು ಮತ್ತು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದೆಡೆ, ಸೂರ್ಯಕುಮಾರ್ ಯಾದವ್ ಅವರು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 28 ರನ್ ಗಳಿಸಿದ್ದಾರೆ. ತಂಡದಲ್ಲಿ ಅವರ ಸ್ಥಾನದ ಬಗ್ಗೆ ಇದೀಗ ಹಲವು ಅಭಿಪ್ರಾಯಗಳು ಹೊರಹೊಮ್ಮುತ್ತಿವೆ.
ಫೆಬ್ರುವರಿ 06 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಆಡಲಿದೆ. ಈಮಧ್ಯೆ, ತಂಡವು ಫೆಬ್ರುವರಿ 20ರಂದು ಬಾಂಗ್ಲಾದೇಶದ ವಿರುದ್ಧ ದುಬೈನಲ್ಲಿ ತನ್ನ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಪ್ರಾರಂಭಿಸಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಶದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ.