ದುಬೈನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಆಘಾತ ಎದುರಾಗಿದೆ. ಅಭ್ಯಾಸ ನಡೆಸುತ್ತಿದ್ದ ವೇಳೆ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರ ಮೊಣಕಾಲಿಗೆ ಪೆಟ್ಟು ಬಿದ್ದಿದೆ. ಫೆಬ್ರುವರಿ 20ರಂದು ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಸೆಣಸಲಿದೆ. ಇದಕ್ಕೂ ಮುನ್ನ ಪಂತ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಅಭ್ಯಾಸ ಮಾಡುತ್ತಿದ್ದಾಗ ಹಾರ್ದಿಕ್ ಪಾಂಡ್ಯ ಅವರು ಪಂತ್‌ಗೆ ಬಾಲ್ ಎಸೆಯುತ್ತಿದ್ದರು. ಈ ವೇಳೆ ಬಾಲ್ ಪಂತ್ ಅವರ ಎಡ ಮೊಣಕಾಲಿಗೆ ಬಡಿದಿದೆ. ಇದರಿಂದ ಪಂತ್ ಕುಂಟುತ್ತಾ ಹೊರನಡೆದಿದ್ದಾರೆ.
ವೈದ್ಯಕೀಯ ಆರೈಕೆಯ ನಂತರ ಮೊಣಕಾಲಿಗೆ ಪಟ್ಟಿಯನ್ನು ಕಟ್ಟಿಕೊಂಡು ಅಭ್ಯಾಸ ಮುಂದುವರಿಸಿದ್ದಾರೆ ಎನ್ನಲಾಗಿದೆ. 2022ರ ಡಿಸೆಂಬರ್‌ನಲ್ಲಿ ಪಂತ್ ಮಾರಣಾಂತಿಕ ಕಾರು ಅಪಘಾತದಿಂದ ಪಾರಾಗಿದ್ದರು. ಈ ವೇಳೆ ಅವರ ಎಡ ಮೊಣಕಾಲಿಗೆ ಬಲವಾದ ಪೆಟ್ಟು ಬಿದ್ದಿತ್ತು.
ಡ್ರೆಸ್ಸಿಂಗ್ ರೂಮ್‌ಗೆ ತೆರಳುವ ಮೊದಲು ಪಂತ್ ಮತ್ತು ಹಾರ್ದಿಕ್ ಪರಸ್ಪರ ತಬ್ಬಿಕೊಂಡರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡ್ರೆಸ್ಸಿಂಗ್ ರೂಂನಿಂದ ಹಿಂತಿರುಗಿದ ನಂತರ ಪಂತ್ ಅವರು ಅಕ್ಷರ್ ಪಟೇಲ್ ಅವರೊಂದಿಗೆ ಸಂತೋಷದಿಂದ ಇದ್ದರು. ಬಳಿಕ ಎಂದಿನಂತೆ ಅಭ್ಯಾಸಕ್ಕೆ ತೆರಳಿದರು.
ಪಂತ್ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಆಡುತ್ತಿದ್ದಾರೆ. ಭಾರತ ತನ್ನೆಲ್ಲ ಪಂದ್ಯಗಳನ್ನು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ. ಫೆಬ್ರುವರಿ 23ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಭಾರತವು ಎರಡು ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ. 2002ರಲ್ಲಿ ಶ್ರೀಲಂಕಾದೊಂದಿಗೆ ಜಂಟಿಯಾಗಿ ಜಯಗಳಿಸಿದ್ದರೆ, 2013ರಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್‌ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.