ಇಂದಿನಿಂದ (ಫೆ.19) ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗಲಿದ್ದು, ಈ ಬಾರಿ ಪಾಕಿಸ್ತಾನ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯ ಧ್ವಜ ಗೈರಾಗಿದ್ದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ವಿವಾದ ಭುಗಿಲೆದ್ದಿತ್ತು. ಇದೀಗ ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಎಚ್ಚೆತ್ತುಕೊಂಡಿದೆ.
ವಿವಾದದ ಬಳಿಕ ಕರಾಚಿ ಸ್ಟೇಡಿಯಂನಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವ ಇತರ ರಾಷ್ಟ್ರಗಳ ಧ್ವಜಗಳ ಜೊತೆಗೆ ಭಾರತದ ಧ್ವಜವನ್ನು ಇದೀಗ ಹಾರಿಸಲಾಗಿದೆ. ಕಾರ್ಯಕ್ರಮ ಈವೆಂಟ್ ಪ್ರಾರಂಭವಾಗುವ ಕೆಲವು ದಿನಗಳಿಗೂ ಮುನ್ನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ಧ್ವಜ ನಾಪತ್ತೆಯಾಗಿದ್ದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ವಿವಾದದ ನಂತರ ಸ್ಪಷ್ಟನೆ ನೀಡಿದ್ದ ಪಿಸಿಬಿ, ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನದಲ್ಲಿ ಆಡುತ್ತಿರುವ ರಾಷ್ಟ್ರಗಳ ಧ್ವಜಗಳನ್ನು ಮಾತ್ರ ಕ್ರೀಡಾಂಗಣಗಳಲ್ಲಿ ಹಾರಿಸಲಾಗಿದೆ ಎಂದಿತ್ತು.
'ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನೆಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಭಾರತ ಪಾಕಿಸ್ತಾನಕ್ಕೆ ಬರುತ್ತಿಲ್ಲ ಎನ್ನುವುದು ನಿಮಗೆಲ್ಲರಿಗೂ ತಿಳಿದಿದೆ. ಹೀಗಾಗಿಯೇ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣ, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ ಮತ್ತು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಪಾಕಿಸ್ತಾನಕ್ಕೆ ಬಂದು ಆಡಲಿರುವ ದೇಶಗಳ ಧ್ವಜಗಳನ್ನು ಮಾತ್ರ ಹಾರಿಸಲಾಗಿದೆ' ಎಂದು ಪಿಸಿಬಿ ಮೂಲಗಳು ತಿಳಿಸಿವೆ.
ಕರಾಚಿ ಮತ್ತು ಲಾಹೋರ್ ಸ್ಟೇಡಿಯಂಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಧ್ವಜಗಳು ಏಕೆ ಇರಲಿಲ್ಲ ಎಂಬ ಪ್ರಶ್ನೆಗೆ, 'ಭಾರತ ತಂಡವು ದುಬೈನಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಎರಡನೆಯದಾಗಿ, ಬಾಂಗ್ಲಾದೇಶ ತಂಡವು ಇನ್ನೂ ಪಾಕಿಸ್ತಾನಕ್ಕೆ ಬಂದಿಲ್ಲ ಮತ್ತು ಭಾರತದ ವಿರುದ್ಧ ತನ್ನ ಮೊದಲ ಪಂದ್ಯವನ್ನು ದುಬೈನಲ್ಲಿ ಆಡಲಿದೆ. ಹೀಗಾಗಿಯೇ ಉಭಯ ದೇಶಗಳ ಧ್ವಜಗಳನ್ನು ಹಾರಿಸಿರಲಿಲ್ಲ' ಎಂದು ಮೂಲಗಳು ತಿಳಿಸಿವೆ.
'ಕ್ರೀಡಾಂಗಣದಲ್ಲಿ ಭಾರತೀಯ ಧ್ವಜವನ್ನು ಹಾರಿಸಲಾಗಿತ್ತೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಉತ್ತರಿಸಬೇಕಿದೆ. ಒಂದು ವೇಳೆ, ಧ್ವಜವನ್ನು ಹಾರಿಸಿಲ್ಲದಿದ್ದರೆ, ಹಾರಿಸಬೇಕಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಎಲ್ಲ 8 ರಾಷ್ಟ್ರಗಳ ಧ್ವಜಗಳನ್ನು ಹಾರಿಸಬೇಕಿತ್ತು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.