ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ದಾಖಲೆ ನಿರ್ಮಾಣ ಮಾಡಿದ್ದು, ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.
ಹೌದು.. ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ 229ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡದ ಪರ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಈ ವೇಳೆ 36 ಎಸೆತಗಳಲ್ಲಿ 7 ಬೌಂಡರಿ ಸಹಿತ ರೋಹಿತ್ ಶರ್ಮಾ 41 ರನ್ ಗಳಿಸಿ ಔಟಾದರು.
ಇದೇ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ತಮ್ಮ ಏಕದಿನ ರನ್ ಗಳಿಕೆಯನ್ನು 11 ಸಾವಿರಕ್ಕೆ ಏರಿಕೆ ಮಾಡಿಕೊಂಡಿದ್ದು, ಆ ಮೂಲಕ ಈ ಸಾಧನೆ ಮಾಡಿದ 4ನೇ ಭಾರತೀಯ ಆಟಗಾರ ಹಾಗೂ ಜಾಗತಿಕ 10ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಭಾರತದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ ಮತ್ತು ಭಾರತದ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.
ವೇಗದ 11 ಸಾವಿರ ರನ್, 2ನೇ ಆಟಗಾರ
ಅಂತೆಯೇ ರೋಹಿತ್ ಶರ್ಮಾ ವೇಗವಾಗಿ 11 ಸಾವಿರ ರನ್ ಗಳಿಸಿದ 2ನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದು, ರೋಹಿತ್ ಈ ಸಾಧನೆಗಾಗಿ 261 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. 222 ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಕಲೆಹಾಕಿರುವ ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ. 276 ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಗಳಿಸಿರುವ ಸಚಿನ್ 3 ಮತ್ತು 286 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿರುವ ರಿಕ್ಕಿ ಪಾಂಟಿಂಗ್ 4ನೇ ಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ 288 ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಕಲೆಹಾಕಿದ್ದರು.
Fewest inngs to 11,000 ODI runs
222 Virat Kohli
261 Rohit Sharma
276 Sachin Tendulkar
286 Ricky Ponting
288 Sourav Ganguly