ಚಾಂಪಿಯನ್ಸ್ ಟ್ರೋಫಿಯ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಐದು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಲಾಹೋರ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 351 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. 352 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ಎದುರಾಯಿತು. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಶೀಘ್ರದಲ್ಲೇ ಪೆವಿಲಿಯನ್‌ಗೆ ಮರಳಿದರು. ಇದಾದ ನಂತರ, ನಾಯಕ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ ಮಾರ್ಕ್ ವುಡ್ ಆಸ್ಟ್ರೇಲಿಯಾಕ್ಕೆ ದೊಡ್ಡ ಹೊಡೆತ ನೀಡಿದರು. ಆದರೆ ಮ್ಯಾಥ್ಯೂ ಶಾರ್ಟ್ 63 ರನ್ ಕೊಡುಗೆ ನೀಡಿದರು. ನಂತರ ಜೋಶ್ ಇಂಗ್ಲಿಸ್ ಮತ್ತು ಅಲೆಕ್ಸ್ ಕ್ಯಾರಿ ಜೊತೆಯಾಟ ಆಸ್ಟ್ರೇಲಿಯಾಗೆ ಚೇತರಿಕೆ ನೀಡಿತು. ಅಲೆಕ್ಸ್ 69 ರನ್ ಗಳಿಸಿ ಔಟಾದರೇ ಜೋಶ್ ಇಂಗ್ಲಿಸ್ ಅಜೇಯ 120 ರನ್ ಗಳ ಬೃಹತ್ ರನ್ ಸಿಡಿಸಿದ್ದು ಆಸ್ಟ್ರೇಲಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಅಂತಿಮವಾಗಿ ಆಸ್ಟ್ರೇಲಿಯಾ 15 ಎಸೆತಗಳು ಬಾಕಿ ಇರುವಂತೆ 5 ವಿಕೆಟ್ ನಷ್ಟಕ್ಕೆ 356 ರನ್ ಬಾರಿಸಿ ಗೆಲುವು ಸಾಧಿಸಿತು. ಆಸ್ಟ್ರೇಲಿಯಾ ಪರ ಬೌಲಿಂಗ್ ಬೆನ್ ದ್ವಾರ್ಶುಯಿಸ್ 3, ಜಂಪಾ ಮತ್ತು ಮಾರ್ನಸ್ ಲ್ಯಾಬುಶೇನ್ ತಲಾ 2 ವಿಕೆಟ್ ಪಡೆದರು.
ಬೆನ್ ಡಕೆಟ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಆಸ್ಟ್ರೇಲಿಯಾ ಮುಂದೆ 352 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಡಕೆಟ್ 143 ಎಸೆತಗಳಲ್ಲಿ 17 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 165 ರನ್ ಗಳಿಸುವ ಮೂಲಕ ತಮ್ಮ ತಂಡಕ್ಕೆ ಮಹತ್ವದ ಕೊಡುಗೆ ನೀಡಿದರು. ಅವರ ಅದ್ಭುತ ಇನ್ನಿಂಗ್ಸ್‌ನಿಂದ ಇಂಗ್ಲೆಂಡ್ 50 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 351 ರನ್ ಗಳಿಸಿತು. ಬೆನ್ ಡಕೆಟ್ ಹೊರತುಪಡಿಸಿ, ಜೋ ರೂಟ್ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರು.