ಜಾಸ್ ಬಟ್ಲರ್ ರಾಜಿನಾಮೆ 
ಕ್ರಿಕೆಟ್

Champions Trophy 2025: ಇಂಗ್ಲೆಂಡ್ ಆಘಾತಕಾರಿ EXIT; ನಾಯಕ ಸ್ಥಾನಕ್ಕೆ Jos Buttler ರಾಜಿನಾಮೆ!

ಜೋಸ್ ಬಟ್ಲರ್ ಅವರನ್ನು 2022 ರಲ್ಲಿ ಇಯಾನ್ ಮಾರ್ಗನ್ ನಿವೃತ್ತಿಯ ನಂತರ ಇಂಗ್ಲೆಂಡ್ ತಂಡದ ವೈಟ್ ಬಾಲ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.

ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಆರಂಭಿಕ ಹಂತದಲ್ಲೇ ಪ್ರಬಲ ಇಂಗ್ಲೆಂಡ್ ತಂಡ ನಿರ್ಗಮನವಾಗಿದ್ದು, ಇದರ ಬೆನ್ನಲ್ಲೇ ತಂಡದ ನಾಯಕ ಸ್ಥಾನಕ್ಕೆ ಜಾಸ್ ಬಟ್ಲರ್ ರಾಜಿನಾಮೆ ನೀಡಿದ್ದಾರೆ.

ಹೌದು.. ಇಂಗ್ಲೆಂಡ್ ನ ಏಕದಿನ ಹಾಗೂ ಟಿ20 ಕ್ರಿಕೆಟ್ ತಂಡದ ನಾಯಕ ಸ್ಥಾನಕ್ಕೆ ಜೋಸ್ ಬಟ್ಲರ್ ರಾಜಿನಾಮೆ ನೀಡಿದ್ದು, ಕರಾಚಿಯಲ್ಲಿ ತಮ್ಮ ತಂಡದ ಕೊನೆಯ ಪಂದ್ಯಕ್ಕೂ ಮುನ್ನ ಬಟ್ಲರ್ ಈ ಘೋಷಣೆ ಮಾಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಾಸ್ ಬಟ್ಲರ್, "ಇದು ನನಗೆ ಮತ್ತು ತಂಡಕ್ಕೆ ಸರಿಯಾದ ಸಮಯ" ಎಂದು ಅವರು ಹೇಳಿದ್ದಾರೆ.

'ಇದು ನನಗೆ ಸರಿಯಾದ ನಿರ್ಧಾರ, ತಂಡಕ್ಕೆ ಸರಿಯಾದ ನಿರ್ಧಾರ ಮತ್ತು ತಂಡವನ್ನು ಮತ್ತೆ ಇರಬೇಕಾದ ಸ್ಥಳಕ್ಕೆ ಕೊಂಡೊಯ್ಯಲು ಬಾಜ್ [ಬ್ರೆಂಡನ್ ಮೆಕಲಮ್] ಅವರೊಂದಿಗೆ ಕೆಲಸ ಮಾಡುವ ಬೇರೊಬ್ಬರು ಬರಬಹುದು ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧ ಸತತ ಸೋಲುಗಳ ನಂತರ ಚಾಂಪಿಯನ್ಸ್ ಟ್ರೋಫಿಯಿಂದ ತಮ್ಮ ತಂಡವು ಬೇಗನೆ ಹೊರಬಿದ್ದಿದ್ದರಿಂದ ನಾನು ಈ ನಿರ್ಣಯಕ್ಕೆ ಬರಬೇಕಾಯಿತು ಎಂಬುದನ್ನು ಒಪ್ಪಿಕೊಂಡಿರುವ ಬಟ್ಲರ್, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆದ ಭಾರತ ಪ್ರವಾಸದಲ್ಲೂ ಇಂಗ್ಲೆಂಡ್ ಹೀನಾಯ ಪ್ರದರ್ಶನ ತೋರಿತ್ತು ಎಂದು ನೆನೆಸಿಕೊಂಡರು.

'ಈ ಪಂದ್ಯಾವಳಿಯು ನನ್ನ ನಾಯಕತ್ವಕ್ಕೆ ಫಲಿತಾಂಶಗಳ ದೃಷ್ಟಿಯಿಂದ ಮುಖ್ಯವಾಗಲಿದೆ. ಬಹುಶಃ ನಾನು ನನ್ನ ನಾಯಕತ್ವ ರಸ್ತೆಯ ಅಂತ್ಯಕ್ಕೆ ಬಂದು ತಲುಪಿದ್ದೇನೆ ಎಂದು ಭಾಸವಾಗುತ್ತಿದೆ. ಸತತ ಸೋಲುಗಳು ಖಂಡಿತಾ ನೋವುಂಟು ಮಾಡುತ್ತದೆ. ಅತಿಯಾದ ಭಾವನೆಗಳು ಇನ್ನೂ ದುಃಖ ಮತ್ತು ನಿರಾಶೆ ಎಂದು ನಾನು ಭಾವಿಸುತ್ತೇನೆ' ಎಂದು ಬಟ್ಲರ್ ಹೇಳಿದ್ದಾರೆ.

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಜೋಸ್ ಬಟ್ಲರ್ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಬಾರಿಗೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.

ಇಂಗ್ಲೆಂಡ್ ಆಘಾತಕಾರಿ ಎಕ್ಸಿಟ್

ಇನ್ನು ಹಾಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ತಂಡ ಕೂಡ ಪಾಕಿಸ್ತಾನದಂತೆಯೇ ಆಘಾತಕಾರಿಯಾಗಿ ಹೊರಬಿದ್ದಿದ್ದು, ಈ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಎರಡೂ ಪಂದ್ಯಗಳಲ್ಲಿ ಸೋತಿದೆ. ಶನಿವಾರ ನಡೆಯುವ ಪಂದ್ಯ ಇಂಗ್ಲೆಂಡ್ ಪಾಲಿಗೆ ಕೇವಲ ಔಪಚಾರಿಕ ಪಂದ್ಯ ಮಾತ್ರ ಆಗಿರಲಿದೆ.

ಅಂದಹಾಗೆ ಜೋಸ್ ಬಟ್ಲರ್ ಅವರನ್ನು 2022 ರಲ್ಲಿ ಇಯಾನ್ ಮಾರ್ಗನ್ ನಿವೃತ್ತಿಯ ನಂತರ ಇಂಗ್ಲೆಂಡ್ ತಂಡದ ವೈಟ್ ಬಾಲ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಅದೇ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ T20 ವಿಶ್ವಕಪ್ ಅನ್ನು ಬಟ್ಲರ್ ನೇತೃತ್ವದಲ್ಲಿ ಇಂಗ್ಲೆಂಡ್ ತಂಡ ಗೆದ್ದಿತ್ತು. ಆ ಬಳಿಕ ಬಟ್ಲರ್ ನಾಯಕತ್ವ ಉತ್ತುಂಗಕ್ಕೇರಿತ್ತು. ಆದರೆ ಆ ಬಳಿಕ ಇಂಗ್ಲೆಂಡ್ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಸ್ಟೇಜ್ ನಲ್ಲೇ ಹೀನಾಯ ಪ್ರದರ್ಶನ ನೀಡಿ ಹೊರಬಿದ್ದಿತ್ತು. ನಂತರ T20 ಕಿರೀಟವನ್ನು ರಕ್ಷಿಸಿಕೊಳ್ಳುವಲ್ಲೂ ವಿಫಲವಾಗಿದ್ದ ಇಂಗ್ಲೆಂಡ್ ಸೆಮಿಫೈನಲ್ ಹಂತದಲ್ಲಿ ಗಯಾನಾದಲ್ಲಿ ಭಾರತ ವಿರುದ್ಧ ನಿರಾಶಾದಾಯಕವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.

ಇನ್ನು ಬಟ್ಲರ್ ಈ ವರೆಗೂ 44 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದಾರೆ. ಇದರಲ್ಲಿ ಇಂಗ್ಲೆಂಡ್ 18 ಪಂದ್ಯಗಳಲ್ಲಿ ಗೆದ್ದು 25 ಪಂದ್ಯಗಳನ್ನು ತಂಡ ಸೋತಿದೆ. ಒಂದು ಪಂದ್ಯ ಟೈ ಆಗಿತ್ತು. ಅದೇ ಸಮಯದಲ್ಲಿ, ಟಿ20 ಕ್ರಿಕೆಟ್ ನಲ್ಲಿ, ಜೋಸ್ ಬಟ್ಲರ್ 51 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, ಇದರಲ್ಲಿ ಇಂಗ್ಲೆಂಡ್ 26 ಪಂದ್ಯಗಳನ್ನು ಗೆದ್ದರೆ, 22 ಪಂದ್ಯಗಳಲ್ಲಿ ಸೋತಿದೆ. ಮೂರು ಪಂದ್ಯಗಳು ಟೈ ಆಗಿದ್ದವು. ಇಂಗ್ಲೆಂಡ್ ಕ್ರಿಕೆಟ್ ತಂಡ ಕಳೆದ 21 ಏಕದಿನ ಪಂದ್ಯಗಳ ಪೈಕಿ 15 ರಲ್ಲಿ ಸೋಲನ್ನು ಅನುಭವಿಸಿದೆ. ಜೋಸ್ ಬಟ್ಲರ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 186 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 134 ಟಿ20 ಪಂದ್ಯಗಳನ್ನು ಆಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT