ಸಿಡ್ನಿ: ನಾಳೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್- ಗವಾಸ್ಕರ್ ಟ್ರೋಫಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದು,
ವೇಗಿ ಜಸ್ಪೀತ್ ಬೂಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ. ಈ ವರದಿ ನಿಜವಾದಲ್ಲಿ ರೋಹಿತ್ ಶರ್ಮಾ ಟೆಸ್ಟ್ ಭವಿಷ್ಯಕ್ಕೂ ಕುತ್ತು ಬರಲಿದ್ದು, 2025ರ ಜೂನ್ ನಲ್ಲಿ ನಡೆಯಲಿರುವ ಮುಂದಿನ ಟೆಸ್ಟ್ ಸರಣಿಯಲ್ಲಿ ಅವರ ನಾಯಕತ್ವ ಬದಲಾಗುವ ಸಾಧ್ಯತೆಯಿದೆ.ಅಂತಿಮ ಪಂದ್ಯದಿಂದ ಹೊರಗುಳಿಯುವುದಾಗಿ ರೋಹಿತ್ ಶರ್ಮಾ ಅವರೇ ಆಯ್ಕೆದಾರರ ಸಮಿತಿ ಮುಖ್ಯಸ್ಥ ಅಜಿತ್ ಅಗರ್ ಕರ್ ಹಾಗೂ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಆಸೀಸ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸೋತ ಬಳಿಕ ಡ್ರೆಸ್ಸಿಂಗ್ ರೂಮ್ ನಲ್ಲಿ ರೋಹಿತ್ ಶರ್ಮಾ ಹಾಗೂ ಗಂಭೀರ್ ನಡುವೆ ಗಲಾಟೆ ನಡೆದಿದೆ ಎಂದು ವರದಿಯಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮುನ್ನಾದಿನದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಂಭೀರ್ , ಡ್ರೆಸ್ಸಿಂಗ್ ರೂಮ್ ಚರ್ಚೆಗಳನ್ನು ಯಾರೂ ಸಾರ್ವಜನಿಕಗೊಳಿಸಬಾರದು. ಕೋಚ್ ಮತ್ತು ಆಟಗಾರನ ನಡುವಿನ ಚರ್ಚೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತ್ರ ಉಳಿಯಬೇಕು. ಹೆಚ್ಚಾಗಿ ಕೇಳಿಬರುತ್ತಿರುವ ಮಾತುಗಳು ಸತ್ಯವಲ್ಲ. ಅದು ವರದಿ ಅಷ್ಟೇ. ಟೀಂ ಇಂಡಿಯಾ ಸುರಕ್ಷಿತವಾಗಿದೆ ಎಂದು ಹೇಳಿದರು.
ಟೆಸ್ಟ್ ಗೆಲ್ಲುವ ತಂತ್ರ ಹೊರತುಪಡಿಸಿ ಹಿರಿಯ ಬ್ಯಾಟ್ಸ್‌ಮನ್ ಕೊಹ್ಲಿ ಮತ್ತು ನಾಯಕ ರೋಹಿತ್ ಜೊತೆ ಬೇರೆ ಯಾವುದರ ಬಗ್ಗೆಯೂ ನಾನು ಮಾತನಾಡಿಲ್ಲ. ನಾಳೆ ಪಿಚ್ ಪರೀಕ್ಷೆ ನಡೆಸುತ್ತೇವೆ, ಆನಂತರವೇ ಆಡುವ ಹನ್ನೊಂದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಭಾರತ ನಾಳೆ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನಾಡಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.