ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಅಂತಿಮ ಹಾಗೂ 5ನೇ ಪಂದ್ಯದಲ್ಲಿ ಭಾರತ ತಂಡ ಮತ್ತೊಂದು ಹೀನಾಯ ಸೋಲು ಕಂಡಿದ್ದು, 3-1 ಅಂತರದಲ್ಲಿ ಸರಣಿ ಸೋಲು ಕಂಡಿದೆ.
2ನೇ ಇನ್ನಿಂಗ್ಸ್ ನಲ್ಲಿ ಭಾರತ ನೀಡಿದ 162 ರನ್ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ 3-1 ಅಂತರದಲ್ಲಿ ತನ್ನದಾಗಿಸಿಕೊಂಡಿತು.
ದುಬಾರಿಯಾದ ಬುಮ್ರಾ ಅನುಪಸ್ಥಿತಿ
ಇನ್ನು ಈ ಪಂದ್ಯದಲ್ಲಿ ಗಾಯಗೊಂಡು ಹೊರಗುಳಿದಿದ್ದ ಜಸ್ ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಬೆನ್ನು ನೋವಿನಿಂದ ಸ್ಕ್ಯಾನಿಂಗ್‌ಗೆ ಒಳಗಾಗಿದ್ದ ಬೂಮ್ರಾ, ಬ್ಯಾಟಿಂಗ್ ಮಾಡಿದರಾದರೂ ಬೌಲಿಂಗ್ ಮಾಡಲಿಲ್ಲ. 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾದ ಆರಂಭಿಕ ವಿಕೆಟ್‌ಗಳನ್ನು ಪಡೆಯುವ ಮೂಲಕ ಕನ್ನಡಿಗ ಪ್ರಸಿದ್ಧ್ ಕೃಷ್ಣ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಆದರೆ ಆಸ್ಟ್ರೇಲಿಯಾ ಬ್ಯಾಟರ್‌ಗಳು ಎಚ್ಚರಿಕೆಯ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸುಲಭದ ತುತ್ತಾದ ಭಾರತ
ಎರಡನೇ ದಿನದಾಟಕ್ಕೆ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿದ್ದ ಭಾರತ ಆ ಮೊತ್ತಕ್ಕೆ 16 ರನ್ ಸೇರಿಸಿ ಆಲೌಟ್ ಆಗಿ, ಆಸ್ಟ್ರೇಲಿಯಾಗೆ 162 ರನ್‌ಗಳ ಗುರಿ ನೀಡಿತು. ಆರಂಭದಲ್ಲಿ ಆಸೀಸ್ ಬ್ಯಾಟರ್‌ಗಳು ಸುಲಭವಾಗಿ ಗೆಲ್ಲುವ ಮುನ್ಸೂಚನೆ ನೀಡಿದರು. ಆದರೆ ಅವರಿಗೆ ಪ್ರಸಿದ್ಧ ಕೃಷ್ಣ ಮೂಗುದಾರ ಹಾಕಿದರು. ಭಾರತದ ಪರ ಕೃಷ್ಣ 3 ಹಾಗೂ ಸಿರಾಜ್ ಒಂದು ವಿಕೆಟ್ ಕಿತ್ತರು.