ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ 5ನೇ ದಿನದಂದು ಭಾರತ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಾಗಿನಿಂದ, ಶುಭಮನ್ ಗಿಲ್ ಮತ್ತು ತಂಡದ ಮೇಲೆ ಸೋಲಿನ ಭೀತಿ ಹೆಚ್ಚಾಗಿತ್ತು. ದಿನದ ಆರಂಭದಲ್ಲಿ, ಆರು ವಿಕೆಟ್‌ಗಳು ಕೈಯಲ್ಲಿರುವಾಗ ಭಾರತಕ್ಕೆ ಕೇವಲ 135 ರನ್‌ಗಳ ಅಗತ್ಯವಿತ್ತು. ಆದರೆ, ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರನ್ನು ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಉತ್ತಮ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಏಕಾಂಗಿ ಪ್ರಯತ್ನದ ಹೊರತಾಗಿಯೂ, ಭಾರತವು 74.5 ಓವರ್‌ಗಳಲ್ಲಿ 170 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು.
ಇಂಗ್ಲೆಂಡ್ ಪರ, ನಾಯಕ ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ಕ್ರಮವಾಗಿ 24 ಮತ್ತು 16 ಓವರ್‌ಗಳಲ್ಲಿ ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಬ್ರೈಡನ್ ಕಾರ್ಸೆ ಎರಡು ವಿಕೆಟ್‌ಗಳನ್ನು ಪಡೆದರು.
ಬ್ಯಾಟ್ಸ್‌ಮನ್‌ಗಳು ಉತ್ತಮ ಜೊತೆಯಾಟವಾಡಲು ಅಸಮರ್ಥರಾಗಿರುದ್ದೇ ತಂಡಕ್ಕೆ ತೀವ್ರ ಹೊಡೆತ ನೀಡಿತು ಎಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟರು.
'60-70 ರನ್‌ಗಳ ಜೊತೆಯಾಟ ಪಂದ್ಯದ ಫಲಿತಾಂಶವನ್ನೇ ಬದಲಿಸಬಹುದಿತ್ತು. ಆದರೆ, ಭಾರತಕ್ಕೆ ಉತ್ತಮ ಜೊತೆಯಾಟ ಬರಲೇ ಇಲ್ಲ. ರವೀಂದ್ರ ಜಡೇಜಾ ಅಪಾಯಕಾರಿ, ವೈಮಾನಿಕ ಹೊಡೆತಗಳನ್ನು ತೆಗೆದುಕೊಳ್ಳುವ ಬದಲು, ವಿಶೇಷವಾಗಿ ಜೋ ರೂಟ್ ಮತ್ತು ಶೋಯೆಬ್ ಬಶೀರ್‌ನಂತಹ ಬೌಲರ್‌ಗಳ ವಿರುದ್ಧ ಹೆಚ್ಚು ಎಚ್ಚರಿಕೆಯಿಂದ ಆಡಬಹುದಿತ್ತು. ಇದರ ಹೊರತಾಗಿಯೂ, ಜಡೇಜಾ ಅವರು ಒತ್ತಡದಲ್ಲಿ ಚೆನ್ನಾಗಿ ಆಡಿದರು' ಎಂದು ಸೋನಿ ಸ್ಪೋರ್ಟ್ಸ್‌ನಲ್ಲಿ ಹೇಳಿದರು.
ಮೊದಲ ಗಂಟೆಯಲ್ಲಿ ಸ್ಟೋಕ್ಸ್ ಮತ್ತು ಆರ್ಚರ್ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಸೇರಿದಂತೆ ಮೂರು ವಿಕೆಟ್‌ಗಳನ್ನು ಕಬಳಿಸಿದಾಗ, ವೋಕ್ಸ್ ಊಟದ ಸಮಯದಲ್ಲಿ ನಿತೀಶ್ ಕುಮಾರ್ ರೆಡ್ಡಿಯನ್ನು ಔಟ್ ಮಾಡಿದರು. ಬಳಿಕ ಇಂಗ್ಲೆಂಡ್ ಸ್ಮರಣೀಯ ಗೆಲುವಿನ ಹಾದಿಯಲ್ಲಿ ಸಾಗಿತು.
ಪಂತ್ ಆರ್ಚರ್ ಅವರ ಎಸೆತವನ್ನು ನಾಲ್ಕು ರನ್ ಗಳಿಸುವ ಮೂಲಕ ಪ್ರಾರಂಭಿಸಿದರು. ಆದರೆ, ಮುಂದೆ ಪ್ರಯೋಜನವಾಗಲಿಲ್ಲ. ಪಂತ್ ಜೋಫ್ರಾ ಆರ್ಚರ್ ಅವರಿಗೆ ಬೌಲ್ಡ್ ಆದರು. ಸ್ಟೋಕ್ಸ್ ರಾಹುಲ್ ಅವರ ವಿಕೆಟ್ ಪಡೆದರು.
ಫಾಲೋ-ಥ್ರೂನಲ್ಲಿ ವಾಷಿಂಗ್ಟನ್ ಸುಂದರ್ ಅವರ ವಿಕೆಟ್ ಅನ್ನು ಪಡೆಯುವ ಮೂಲಕ ಆರ್ಚರ್ ಮತ್ತೊಂದು ಅದ್ಭುತ ಕ್ಷಣವನ್ನು ಸೃಷ್ಟಿಸಿದರು. ನಾಲ್ಕು ಎಸೆತಗಳನ್ನು ಎದುರಿಸಿದ ವಾಷಿಂಗ್ಟನ್ ಶೂನ್ಯಕ್ಕೆ ನಿರ್ಗಮಿಸಿದರು.