ಇಂಗ್ಲೆಂಡ್ vs ಭಾರತ ಟೆಸ್ಟ್ ಸರಣಿಯಲ್ಲಿ ಕರುಣ್ ನಾಯರ್ ಉತ್ತಮ ಪ್ರದರ್ಶನ ನೀಡಿಲ್ಲ. ಹೆಡಿಂಗ್ಲಿ, ಎಡ್ಜ್‌ಬಾಸ್ಟನ್ ಮತ್ತು ಲಾರ್ಡ್ಸ್‌ನಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳ ನಂತರ, ಒಟ್ಟು 249 ಎಸೆತಗಳನ್ನು ಎದುರಿಸಿದ ಕರುಣ್ ನಾಯರ್ 22 ಕ್ಕಿಂತ ಕಡಿಮೆ ಸರಾಸರಿಯಲ್ಲಿ ಕೇವಲ 131 ರನ್‌ಗಳನ್ನು ಗಳಿಸಿದ್ದಾರೆ. ಭಾರತದ ಜೆರ್ಸಿಯನ್ನು ಧರಿಸಲು ಎಂಟು ವರ್ಷಗಳು ಕಾದ ಬಳಿಕ ಅವಕಾಶ ಸಿಕ್ಕಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ಕರ್ನಾಟಕದ ಬ್ಯಾಟ್ಸಮನ್ ಸಂಕಷ್ಟ ಎದುರಿಸುತ್ತಿದ್ದಾರೆ.
ಕರುಣ್ ನಾಯರ್ ಅವರ ಸ್ಥಾನದ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಸ್ಪಷ್ಟನೆ ನೀಡಿದ್ದಾರೆ. ಗೆಲ್ಲುವ ಸ್ಥಿತಿಯಲ್ಲಿದ್ದ ಎರಡು ಟೆಸ್ಟ್ ಪಂದ್ಯಗಳನ್ನು ಸೋತರೂ, ತಂಡವು ಉತ್ತಮ ಉತ್ಸಾಹದಲ್ಲಿದೆ ಎಂದು ಹೇಳಿದರು. 'ಸರಣಿಯಲ್ಲಿ ನೀವು 2-1 ಅಂತರದಲ್ಲಿ ಹಿಂದುಳಿದಿರುವಾಗಲೂ ಸರಣಿಯ ಹೆಚ್ಚಿನ ಭಾಗಗಳಲ್ಲಿ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದು ನಮಗೆ ಅನಿಸುತ್ತದೆ. ಬಹಳ ಕಡಿಮೆ ಅವಧಿಯಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಕಳೆದುಕೊಳ್ಳುವ ಪುನರಾವರ್ತನೆಯು ಎರಡು ಸೋಲುಗಳಿಗೆ ಪ್ರಮುಖ ಕಾರಣವಾಗಿದೆ' ಎಂದರು.
'ಹೆಡಿಂಗ್ಲಿಯಲ್ಲಿ ಮತ್ತು ಲಾರ್ಡ್ಸ್‌ನಲ್ಲಿ ತಂಡವು 40 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು ಎಂದು ನಾವು ಭಾವಿಸುತ್ತೇವೆ. ಆದರೆ, ನೀವು ಅದನ್ನು ಪ್ರತ್ಯೇಕವಾಗಿ ನೋಡಿದರೆ, ಎಲ್ಲ ಬ್ಯಾಟ್ಸ್‌ಮನ್‌ಗಳ ರನ್ ಟ್ಯಾಲಿಯನ್ನು ನೋಡಿದರೆ ಅವರೆಲ್ಲರೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ' ಎಂದು ಅವರು ಹೇಳಿದರು.
ಕರುಣ್‌ನಂತಹ ಆಟಗಾರರ ಲಯ ಚೆನ್ನಾಗಿದೆ, ಅವರ ಗತಿ ಚೆನ್ನಾಗಿದೆ ಎಂದು ನಮಗೆ ಅನಿಸುತ್ತದೆ. ನಾವು ಮೂವರಿಂದ ಹೆಚ್ಚಿನ ರನ್‌ಗಳನ್ನು ಬಯಸುತ್ತೇವೆ. ನಾವು ಚೆನ್ನಾಗಿ ಮಾಡಿದ್ದರ ಮೇಲೆ ನಿಜವಾಗಿಯೂ ಗಮನಹರಿಸೋಣ ಮತ್ತು ನಮಗೆ ಫಲಿತಾಂಶಗಳನ್ನು ಕಳೆದುಕೊಂಡಿರುವ ಸಣ್ಣ ವಿಷಯಗಳ ಮೇಲೆಯೂ ಗಮನಹರಿಸೋಣ' ಎಂದು ರಯಾನ್ ಟೆನ್ ಡೋಸ್ಚೇಟ್ ಹೇಳಿದರು.
ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-2 ಅಂತರದಿಂದ ಹಿನ್ನಡೆ ಅನುಭವಿಸುತ್ತಿರುವಾಗ ಮತ್ತು ಮುಂದಿನ ಪಂದ್ಯಕ್ಕೆ ಇನ್ನೂ ಒಂದು ವಾರ ಬಾಕಿ ಇರುವಾಗ, ಆಡಳಿತ ಮಂಡಳಿ ಕರುಣ್ ನಾಯರ್ ಅವರಿಗೆ ಅಂಟಿಕೊಳ್ಳಬೇಕೆ ಅಥವಾ ಅವರಿಗಿಂತ ಕಿರಿಯ ಆಟಗಾರ ಸಾಯಿ ಸುದರ್ಶನ್ ಅವರಿಗೆ ಅವಕಾಶ ನೀಡಬೇಕೇ ಎಂಬ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಚೊಚ್ಚಲ ಪಂದ್ಯದ ನಂತರ ಆಡುವ ಹನ್ನೊಂದರ ಬಳಗದಿಂದ ಸಾಯಿ ಸುದರ್ಶನ್ ಹೊರಗುಳಿದಿದ್ದಾರೆ.
ಭಾರತ ತಂಡ ಸದ್ಯ ತಂಡದಲ್ಲಿ ಒಂದೇ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಕರುಣ್ ನಾಯರ್ ಬದಲಿಗೆ ಸಾಯಿ ಸುದರ್ಶನ್ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಕರೆತರುವ ಸಾಧ್ಯತೆ ಇದೆ. ಏಕೆಂದರೆ, ಜುಲೈ 23 ರಿಂದ ಪ್ರಾರಂಭವಾಗುವ ಪಂದ್ಯದಲ್ಲಿ ಭಾರತ ಸರಣಿಯನ್ನು ಸಮಬಲಗೊಳಿಸಲು ನೋಡುತ್ತಿದೆ.