ಭಾರತ ಮತ್ತು ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್‌ನ 3ನೇ ದಿನದಂದು ರಿಷಭ್ ಪಂತ್ ರನೌಟ್ ಆಗಿದ್ದು, ಪಂದ್ಯವನ್ನೇ ತಲೆಕೆಳಗಾಗಿ ಮಾಡಿತು. ಆ ಕ್ಷಣದಲ್ಲಿ ಭಾರತ ಗೆಲ್ಲುವ ತಂಡವಾಗಿತ್ತು. ಆದರೆ, ಅದೊಂದು ರನೌಟ್ ಇಂಗ್ಲೆಂಡ್ ಪರವಾಗಿ ಕೆಲಸ ಮಾಡಿತು. ಶುಭಮನ್ ಗಿಲ್ ನೇತೃತ್ವದ ತಂಡವು 3 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತ್ತು. ತ್ರೀ ಲಯನ್ಸ್ ತಂಡಕ್ಕಿಂತ ಕೇವಲ 132 ರನ್‌ಗಳ ಹಿಂದಿತ್ತು. ಆ ಹಂತದಿಂದ ಭಾರತ ಸುಲಭವಾಗಿ ಮುನ್ನಡೆ ಸಾಧಿಸಬಹುದಿತ್ತು. ಆದರೆ, ಅಂತಿಮವಾಗಿ ಅವರು 387 ರನ್‌ಗಳಿಗೆ ಆಲೌಟ್ ಆದರು. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿದ ಮೊತ್ತ ಇದು.
ರನೌಟ್ ಆಗುವ ಹೊತ್ತಿಗೆ ಕೆಎಲ್ ರಾಹುಲ್ 99 ರನ್ ಗಳಿಸಿದ್ದರು ಮತ್ತು ರಿಷಭ್ ಪಂತ್ ಊಟದ ವಿರಾಮಕ್ಕೂ ಮುನ್ನವೇ ಶತಕ ಪೂರೈಸಲು ಕೆಎಲ್ ರಾಹುಲ್ ಅವರಿಗೆ ಸ್ಟ್ರೈಕ್ ನೀಡಲು ಬಯಸಿದ್ದರು. ಇದುವೇ ರಿಷಬ್ ಪಂತ್ ರನೌಟ್ ಆಗುವಲ್ಲಿ ದೊಡ್ಡ ಕೊಡುಗೆ ನೀಡಿತು. ಪಂದ್ಯದ ನಂತರ ಮಾತನಾಡಿದ ರಾಹುಲ್, ಶತಕ ಗಳಿಸುವ ಆತುರದಿಂದಲೇ ರಿಷಭ್ ಪಂತ್ ಅವರು ರನೌಟ್ ಆದರು ಎಂಬುದನ್ನು ಒಪ್ಪಿಕೊಂಡರು.
ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಇದೀಗ ಕೆಎಲ್ ರಾಹುಲ್ ಮತ್ತು ಟೀಂ ಇಂಡಿಯಾದ ಮನಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
'ಊಟಕ್ಕೂ ಮುನ್ನವೇ 100 ರನ್ ಗಳಿಸುವುದು ಏಕೆ ಮುಖ್ಯ ಎಂದು ಯಾರಾದರೂ ಅವರನ್ನು ಕೇಳಿದ್ದಾರೆಯೇ? ಅದಕ್ಕೆ ಒಂದು ಕಾರಣವಿರಬೇಕು. ಅದು ಏಕೆ ಒಂದು ಆಲೋಚನೆಯಾಗಿತ್ತು? ಅದನ್ನು ಏಕೆ ಅಷ್ಟೊಂದು ಆಳವಾಗಿ ಪರಿಗಣಿಸಲಾಯಿತು? ತಂಡದ ಗುರಿಗಳಿಗಿಂತಲೂ ಹೆಚ್ಚಾಗಿ, ವೈಯಕ್ತಿಕ ಸಾಧನೆಗೆ ಏಕೆ ಆದ್ಯತೆ ನೀಡಲಾಯಿತು ಎಂದು ಯಾರಾದರೂ ಅವರನ್ನು ಕೇಳಿದ್ದರೆ, ವೈಯಕ್ತಿಕ ಸಾಧನೆಗಳು ಆಟದಲ್ಲಿನ ಕಾರ್ಯಕ್ಷಮತೆ ಮತ್ತು ಆದ್ಯತೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು' ಎಂದು ಉತ್ತಪ್ಪ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
'ರಾಹುಲ್ ಮತ್ತು ಪಂತ್ ನಡುವಿನ ಮಾತುಕತೆಯು ಹೀಗಿತ್ತು ಎನಿಸುತ್ತದೆ. ನಾವು ಆಕ್ರಮಣಕಾರಿಯಾಗಿ ಆಡಬೇಕೆಂದು ಎಂದು ನಾನು ಭಾವಿಸುತ್ತೇನೆ, ನಾವಿಬ್ಬರೂ ಸಿದ್ಧರಾಗಿದ್ದೇವೆ. ಊಟಕ್ಕೂ ಮೊದಲು ನಾನು 100 ರನ್ ಗಳಿಸಲು ಸಾಧ್ಯವಾದರೆ, ನಾವು ತಕ್ಷಣವೇ ಅವರ ವಿರುದ್ಧ ಆಕ್ರಮಣಕಾರಿಯಾಗಿ ಆಡಬಹುದು ಮತ್ತು ನಂತರ ನಾನು ಆಕ್ರಮಣಕಾರಿಯಾಗಿ ಆಡುವಾಗ ನೀವು ರಕ್ಷಣಾತ್ಮಕ ಆಟವಾಡಿ ಮತ್ತು ಇದರಿಂದ ಅವರನ್ನು ಆಟದಿಂದ ಸಂಪೂರ್ಣವಾಗಿ ಹೊರಗಿಡಬಹುದು. ಎಂಬುದು ಬಹುಶಃ ಅವರಿಬ್ಬರ ಆಲೋಚನಾ ಪ್ರಕ್ರಿಯೆಯಾಗಿರಬಹುದು' ಎಂದು ಅವರು ಹೇಳಿದರು.
ಭಾರತೀಯ ಕ್ರಿಕೆಟಿಗರ ವೃತ್ತಿಜೀವನದಲ್ಲಿ ವೈಯಕ್ತಿಕ ಮೈಲಿಗಲ್ಲು ಹೇಗೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಉತ್ತಪ್ಪ ಗಮನಸೆಳೆದರು. ಆ ಸಂಸ್ಕೃತಿಯನ್ನು ಎತ್ತಿ ತೋರಿಸುವುದಕ್ಕಾಗಿ ಅವರು ಭಾರತೀಯ ಮಾಧ್ಯಮ ಮತ್ತು ವಿಮರ್ಶಕರನ್ನು ತರಾಟೆಗೆ ತೆಗೆದುಕೊಂಡರು.
'ಈ ಸಂಖ್ಯೆಗಳು ದೀರ್ಘಾವಧಿಯಲ್ಲಿ ಆಸ್ಟ್ರೇಲಿಯಾ ಅಥವಾ ಇಂಗ್ಲಿಷ್ ಆಟಗಾರನಿಗೆ ಮುಖ್ಯವಾಗುತ್ತವೆ ಎಂದು ನಾನು ಭಾವಿಸುವುದಿಲ್ಲ. ಆದರೆ, ಭಾರತೀಯ ಆಟಗಾರನಿಗೆ ಇದು ಮುಖ್ಯವಾಗಿದೆ. ಶತಕ ಗಳಿಸುವುದು ಮುಖ್ಯವಾಗಿದೆ. ಇದು ಬಹಳಷ್ಟು ಅರ್ಥಪೂರ್ಣವಾಗಿದೆ ಏಕೆಂದರೆ ಇದು ಭಾರತೀಯ ಮಾಧ್ಯಮ ಮತ್ತು ವಿಮರ್ಶಕರಿಗೂ ಹೆಚ್ಚು ಅರ್ಥಪೂರ್ಣವಾಗಿದೆ. ಆದ್ದರಿಂದ ಶತಕ ಮತ್ತು ಮೈಲಿಗಲ್ಲುಗಳು ದೊಡ್ಡ ವಿಷಯ' ಎಂದು ಉತ್ತಪ್ಪ ಹೇಳಿದರು.