ಟೀಂ ಇಂಡಿಯಾದ ಆಟಗಾರ ಸರ್ಫರಾಜ್ ಖಾನ್ ಇದೀಗ ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲೆಡೆ ಅಚ್ಚರಿಗೆ ಕಾರಣರಾಗಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯದ ಸರ್ಫರಾಜ್, ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ದೀರ್ಘಕಾಲದಿಂದ ಅವರ ಫಿಟ್‌ನೆಸ್ ಬಗ್ಗೆ ಪ್ರಶ್ನೆಗಳು ಏಳುತ್ತಿದ್ದವು. ಕಳೆದ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಸರ್ಫರಾಜ್, ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ದೇಶೀಯ ಕ್ರಿಕೆಟ್‌ನಲ್ಲಿ ಸರ್ಫರಾಜ್ ಅವರ ಬ್ಯಾಟ್‌ನಿಂದ ರನ್‌ಗಳು ಬರುತ್ತಿದ್ದರೂ, ಫಿಟ್‌ನೆಸ್ ವಿಚಾರದಲ್ಲಿ ಟೀಕೆಗೆ ಗುರಿಯಾಗುತ್ತಿದ್ದರು. ಇದೀಗ ಬಲಗೈ ಬ್ಯಾಟ್ಸ್‌ಮನ್ ತಮ್ಮ ಫಿಟ್‌ನೆಸ್‌ನ ಮೇಲೆಯೂ ಶ್ರಮಿಸುವ ಮೂಲಕ ತೂಕ ಕಳೆದುಕೊಂಡಿದ್ದಾರೆ.
ಸರ್ಫರಾಜ್ ತಾವು ತೂಕ ಕಳೆದುಕೊಂಡಿರುವ ಬಗ್ಗೆ ಫೋಟೊ ಹಂಚಿಕೊಂಡಿದ್ದು, ಅಭಿಮಾನಿಗಳು ಬ್ಯಾಟ್ಸ್‌ಮನ್‌ನ ದೃಢಸಂಕಲ್ಪವನ್ನು ಕೊಂಡಾಡಿದ್ದಾರೆ. ಜಿಮ್‌ನಲ್ಲಿ ತೆಗೆದ ಚಿತ್ರವನ್ನು ಹಂಚಿಕೊಂಡ ಸರ್ಫರಾಜ್, ತಾವು 17 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಹೇಳಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕಾಗಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಸರ್ಫರಾಜ್ ಅವರನ್ನು ತಂಡದಿಂದ ಕೈಬಿಟ್ಟಾಗ, ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ಭಾರತೀಯ ಮಾಜಿ ಕ್ರಿಕೆಟಿಗರು ಸರ್ಫರಾಜ್ ಅವರು ಇನ್ನಷ್ಟು ಬಲವಾಗಿ ಪುಟಿದೇಳುವಂತೆ ಬೆಂಬಲ ನೀಡಿದ್ದರು.
'ಇದು ತುಂಬಾ ದುರದೃಷ್ಟಕರ... ತಂಡದಲ್ಲಿ ಅವರ ಹೆಸರನ್ನು ನೋಡದಿರುವುದು ನನಗೆ ಸ್ವಲ್ಪ ಆಘಾತವನ್ನುಂಟುಮಾಡಿತು. ಅವರು ಬಲವಾಗಿ ಮರಳುತ್ತಾರೆ ಎಂಬ ನಂಬಿಕೆ ನನಗಿದೆ. ಅವರು ಮತ್ತೆ ತಂಡಕ್ಕೆ ಮರಳುವ ಇಚ್ಛಾಶಕ್ತಿಯನ್ನು ಹೊಂದಿದ್ದಾರೆ... ನಾನು ಹೇಳಬಲ್ಲೆ, ನಿರಾಶೆಗೊಳ್ಳಬೇಡಿ, ನಿಮಗೆ ನಿಮ್ಮ ಅರ್ಹತೆ ಇದೆ. ಇಂದು ಅಲ್ಲದಿದ್ದರೆ ನಾಳೆ ಅವಕಾಶ ಸಿಗುತ್ತದೆ... ಕರುಣ್ ನಾಯರ್ ಅವರನ್ನು ನೋಡಿ' ಎಂದು ಹರ್ಭಜನ್ ಹೇಳಿದ್ದರು.