ಹಲವು ದಿನಗಳಿಂದ ಫಿಟ್‌ನೆಸ್ ವಿಚಾರವಾಗಿ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದ ಟೀಂ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ ಇದೀಗ ಗಂಭೀರ ದೈಹಿಕ ರೂಪಾಂತರಕ್ಕೆ ಒಳಗಾಗಿದ್ದಾರೆ. 27 ವರ್ಷದ ಆಟಗಾರ ಕಳೆದ 30-45 ದಿನಗಳಲ್ಲಿ 17 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹೊಸ ಲುಕ್‌ನ ಫೋಟೊ ಹಂಚಿಕೊಂಡಿದ್ದು, ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅವರ ಕ್ರಿಕೆಟ್ ಫಿಟ್ನೆಸ್ ಬಗ್ಗೆ ಎಂದಿಗೂ ಸಂದೇಹವಿರಲಿಲ್ಲ. ಸರ್ಫರಾಜ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದೀರ್ಘ ಇನಿಂಗ್ಸ್ ಆಡುವ ಅಭ್ಯಾಸವನ್ನು ಹೊಂದಿದ್ದರು. ಆದ್ದರಿಂದ ಅವರು ಚುರುಕಾಗಿದ್ದರು. ಒಂದು ಮತ್ತು ಎರಡು ರನ್ ಗಳಿಸಲು ವಿಕೆಟ್‌ಗಳ ನಡುವೆ ಓಡುವುದು ಬಹುಶಃ ಅವರಿಗಿದ್ದ ಏಕೈಕ ದೌರ್ಬಲ್ಯವಾಗಿತ್ತು.
2012ರ ನಂತರ ವಿರಾಟ್ ಕೊಹ್ಲಿ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದನ್ನು ನಾವು ನೋಡಿದ್ದೇವೆ. ಅವರ ಕೌಶಲ್ಯ ಮತ್ತು ಫಿಟ್ನೆಸ್ ಸಾಕಷ್ಟು ಬದಲಾಗಿತ್ತು. ವಿಕೆಟ್‌ಗಳ ನಡುವಿನ ಅವರ ಓಟವು ಸಖತ್ ವೇಗವಾಗಿತ್ತು. ಕೊಹ್ಲಿಯ ನಿಘಂಟಿನಲ್ಲಿ ದಣಿವು ಎಂಬ ಪದವೇ ಇಲ್ಲದಂತಾಯಿತು. ಮೈದಾನದಲ್ಲಿ ಇರುವಾಗ ಅವರ ಎನರ್ಜಿ ಇತರ ಆಟಗಾರರಿಗೂ ನೆರವಾಗುತ್ತಿತ್ತು.
ಕೊಹ್ಲಿ ಅವರ ದೈಹಿಕ ರೂಪಾಂತರದ ದೊಡ್ಡ ಭಾಗವೆಂದರೆ ಆಹಾರ ಪದ್ಧತಿ. ಆ ದಿನಗಳಲ್ಲಿ ಅವರು ತಿಂಗಳುಗಟ್ಟಲೆ ಚಾಕೊಲೇಟ್ ಕೂಡ ತಿಂದಿರಲಿಲ್ಲ. ಭಾರತದ ಮಾಜಿ ನಾಯಕ 2017ರಲ್ಲಿ ತಮ್ಮ ಡಯಟ್ ಅನ್ನು ಹಂಚಿಕೊಂಡಿದ್ದರು. ಪ್ರತಿದಿನ ತಮ್ಮ ಊಟ ಏನಾಗಿರುತ್ತದೆ ಎಂಬುದನ್ನು ಹೇಳಿದ್ದರು.
'ನನ್ನ ಉಪಾಹಾರವೆಂದರೆ, ನಾನು ಮೂರು ಮೊಟ್ಟೆಯ ಬಿಳಿಭಾಗದೊಂದಿಗೆ ಆಮ್ಲೆಟ್, ಒಂದು ಸಂಪೂರ್ಣ ಮೊಟ್ಟೆ, ಕರಿಮೆಣಸು ಮತ್ತು ಚೀಸ್ ಜೊತೆಗೆ ಪಾಲಕ್ ಮತ್ತು ಸ್ವಲ್ಪ ಗ್ರಿಲ್ಡ್ ಬೇಕನ್ ಅಥವಾ ಸ್ಮೋಕಡ್ ಸಾಲ್ಮನ್ ತಿನ್ನುತ್ತೇನೆ. ನಾನು ಪಪ್ಪಾಯಿ, ಕಲ್ಲಂಗಡಿ ಅಥವಾ ಡ್ರ್ಯಾಗನ್ ಫ್ರೂಟ್ ಲಭ್ಯವಿದ್ದರೆ ತಿನ್ನುತ್ತೇನೆ. ಗುಡ್ ಫ್ಯಾಟ್‌ಗಾಗಿ ನಾನು ಸಾಕಷ್ಟು ಪ್ರಮಾಣದ ಚೀಸ್ ತಿನ್ನುತ್ತೇನೆ. ನಾನು ಬೆಣ್ಣೆಯನ್ನು ಒಯ್ಯುತ್ತೇನೆ ಮತ್ತು ಹೋಟೆಲ್‌ಗಳಿಂದ ಗ್ಲುಟನ್-ಮುಕ್ತ ಬ್ರೆಡ್ ಪಡೆಯುತ್ತೇನೆ. ನಿಂಬೆಯೊಂದಿಗೆ ಗ್ರೀನ್ ಟೀ ಸೇವಿಸುತ್ತೇನೆ. ನಾನು ಅದನ್ನು 3-4 ಕಪ್ ಕುಡಿಯುತ್ತೇನೆ. ನಮ್ಮ (ಟೀಮ್ ಇಂಡಿಯಾ) ತರಬೇತುದಾರ ಬಸು ನನಗೆ ಸ್ವಲ್ಪ ಸ್ನಾಯುಗಳನ್ನು ಹಾಕಲು ಹೇಳಿದಾಗ, ನಾನು ಕೆಂಪು ಮಾಂಸವನ್ನು ಹೆಚ್ಚಿಸುತ್ತೇನೆ; ಇಲ್ಲದಿದ್ದರೆ, ಸಾಮಾನ್ಯವಾಗಿ ಮಧ್ಯಾಹ್ನದ ಊಟಕ್ಕೆ, ಗ್ರಿಲ್ಡ್ ಚಿಕನ್ ಮತ್ತು ಹಿಸುಕಿದ ಆಲೂಗಡ್ಡೆ, ಪಾಲಕ್ ಮತ್ತು ತರಕಾರಿಗಳು ಮತ್ತು ರಾತ್ರಿಯ ಊಟಕ್ಕೆ, ಸೀಫುಡ್ ಸೇವಿಸುತ್ತೇನೆ' ಎಂದು ಕೊಹ್ಲಿ ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಹೇಳಿದರು.
ಸರ್ಫರಾಜ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರ ತಂದೆ ನೌಶಾದ್ ಖಾನ್, ತಮ್ಮ ಮಗ ತನ್ನ ಆಹಾರ ಪದ್ಧತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಅನ್ನ ಮತ್ತು ರೊಟ್ಟಿಯಂತಹ ಸಾಂಪ್ರದಾಯಿಕ ಭಾರತೀಯ ಆಹಾರಗಳು ಈಗ ಅವರ ಆಹಾರ ಪದ್ಧತಿಯಿಂದ ಸಂಪೂರ್ಣವಾಗಿ ಹೊರಗುಳಿದಿವೆ. ಅವರು ಗ್ರಿಲ್ಲಡ್ ಮತ್ತು ಬಾಯ್ಲಡ್ ಆಹಾರವನ್ನು ಸೇವಿಸುತ್ತಿದ್ದಾರೆ. ಗ್ರೀನ್ ಟೀ ಕುಡಿಯುತ್ತಿದ್ದಾರೆ. ಸಕ್ಕರೆ, ಮೈದಾ ಮತ್ತು ಬೇಕರಿ ವಸ್ತುಗಳು ಸಂಪೂರ್ಣವಾಗಿ ಹೊರಗುಳಿದಿವೆ.
'ನಾವು ನಮ್ಮ ಆಹಾರಕ್ರಮವನ್ನು ಸಾಕಷ್ಟು ನಿಯಂತ್ರಿಸಿದ್ದೇವೆ. ನಾವು ರೊಟ್ಟಿ, ಅನ್ನ ಇತ್ಯಾದಿಗಳನ್ನು ತಿನ್ನುವುದನ್ನು ನಿಲ್ಲಿಸಿದ್ದೇವೆ. ನಾವು 1 ರಿಂದ 1.5 ತಿಂಗಳಿನಿಂದ ಮನೆಯಲ್ಲಿ ರೊಟ್ಟಿ ಅಥವಾ ಅನ್ನವನ್ನು ತಿನ್ನುತ್ತಿಲ್ಲ. ನಾವು ಬ್ರೊಕೊಲಿ, ಕ್ಯಾರೆಟ್, ಸೌತೆಕಾಯಿ, ಸಲಾಡ್ ಮತ್ತು ಹಸಿರು ತರಕಾರಿ ಸಲಾಡ್ ತಿನ್ನುತ್ತೇವೆ. ಅದರೊಂದಿಗೆ, ನಾವು ಗ್ರಿಲ್ ಮಾಡಿದ ಮೀನು, ಗ್ರಿಲ್ ಮಾಡಿದ ಚಿಕನ್, ಬಾಯ್ಲಡ್ ಚಿಕನ್, ಬಾಯ್ಲಡ್ ಮೊಟ್ಟೆ ಇತ್ಯಾದಿಗಳನ್ನು ತಿನ್ನುತ್ತೇವೆ. ನಾವು ಗ್ರೀನ್ ಟೀ ಮತ್ತು ಗ್ರೀನ್ ಕಾಫಿಯನ್ನು ಸಹ ಸೇವಿಸುತ್ತಿದ್ದೇವೆ. ನಾವು ಅವಕಾಡೊಗಳನ್ನು ಸಹ ತಿನ್ನುತ್ತೇವೆ. ಮೊಳಕೆ ಕಾಳುಗಳು ಸಹ ಇವೆ. ಆದರೆ ಮುಖ್ಯ ವಿಷಯವೆಂದರೆ, ನಾವು ರೊಟ್ಟಿ ಮತ್ತು ಅನ್ನವನ್ನು ತಿನ್ನುವುದನ್ನು ನಿಲ್ಲಿಸಿದ್ದೇವೆ. ನಾವು ಸಕ್ಕರೆ ತಿನ್ನುವುದನ್ನು ನಿಲ್ಲಿಸಿದ್ದೇವೆ. ನಾವು ಮೈದಾ ಮತ್ತು ಬೇಕರಿ ವಸ್ತುಗಳನ್ನು ತಿನ್ನುವುದನ್ನು ನಿಲ್ಲಿಸಿದ್ದೇವೆ. ಅವರು 1.5 ತಿಂಗಳೊಳಗೆ ಸುಮಾರು 10 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಅವರು ತಮ್ಮ ತೂಕವನ್ನು ಇನ್ನಷ್ಟು ಕಡಿಮೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ' ಎಂದು ನೌಶಾದ್ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದರು.