ಲಂಡನ್: ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಮೆಂಟ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಪಂದ್ಯವನ್ನಾಡಲು ನಿರಾಕರಿಸಿದ್ದು, ಇದೇ ವಿಚಾರವಾಗಿ ಪ್ರಶ್ನೆ ಮಾಡಿದ ಪಾಕಿಸ್ತಾನ ಪತ್ರಕರ್ತನಿಗೆ ಭಾರತ ತಂಡದ ಮಾಜಿ ಆಟಗಾರ ಶಿಖರ್ ಧವನ್ ಖಡಕ್ ತಿರುಗೇಟು ನೀಡಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಎರಡನೇ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (Worlds Championship of Legends) ಟೂರ್ನಮೆಂಟ್‌ನಲ್ಲಿ ಇಂಡಿಯಾ ಚಾಂಪಿಯನ್ಸ್ (India Champions) ತಂಡ ಪಾಕಿಸ್ತಾನ ತಂಡದ ವಿರುದ್ಧ ಆಡಲು ನಿರಾಕರಿಸಿದ್ದ ವಿಚಾರ ವ್ಯಾಪಕ ವೈರಲ್ ಆಗಿತ್ತು.
ಹಾಲಿ ಟೂರ್ನಿಯಲ್ಲಿ ಭಾರತ ತಂಡಕ್ಕೆ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹಾಲಿ ಚಾಂಪಿಯನ್ ಆಗಿರುವ ಇಂಡಿಯಾ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಆದಾಗ್ಯೂ ಈ ಲೀಗ್ನಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡ, ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಪಂದ್ಯವನ್ನು ಆಡಲು ನಿರಾಕರಿಸಿತು. ತಂಡದ ಈ ನಿರ್ಧಾರಕ್ಕೆ ಪಾಕ್ ತಂಡದ ಆಟಗಾರರು ಆಕ್ರೋಶ ಹೊರಹಾಕಿದ್ದರು.
ಇದೀಗ ಇದೇ ವಿಚಾರವಾಗಿ ಪ್ರಶ್ನೆ ಮಾಡಿದ ಪತ್ರಕರ್ತನಿಗೆ ಭಾರತದ ಮಾಜಿ ಆಟಗಾರ ಶಿಖರ್ ಧವನ್ ಖಡಕ್ ತಿರುಗೇಟು ನೀಡಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ ಸೆಮೀಸ್ ಪ್ರವೇಶಿಸಿದರೆ ಆಗಲೂ ನೀವು ಸೆಮೀಸ್ ನಲ್ಲಿ ಆಡುವುದಿಲ್ಲವೇ ಎಂದು ಪಾಕಿಸ್ತಾನ ಪತ್ರಕರ್ತ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರ ನೀಡಿದ ಧವನ್, 'ಅಣ್ಣ, ಈ ಪ್ರಶ್ನೆ ಕೇಳಲು ಇದು ಸರಿಯಾದ ಜಾಗವಲ್ಲ. ಆದಾಗ್ಯೂ ನೀವು ಈ ಪ್ರಶ್ನೆಯನ್ನು ಕೇಳುವುದರಿಂದ ನಾನು ಒತ್ತಡಕ್ಕೆ ಸಿಲುಕಿ ಏನಾದರೂ ಹೇಳುತ್ತೇನೆ ಎಂದು ನೀವು ಭಾವಿಸುತ್ತೀರಿ. ಆದರೆ ನಾನು ಆ ರೀತಿಯಾಗಿ ಏನನ್ನು ಹೇಳುವುದಿಲ್ಲ. ನೀವು ಈ ಪ್ರಶ್ನೆಯನ್ನು ಕೇಳಬಾರದಿತ್ತು. ಆದರೂ ಹೇಳುತ್ತೀನಿ ಕೇಳಿ, ನಾವು ಮೊದಲು ಆಡಿಲ್ಲವೆಂದಾಗ, ಈಗಲೂ ಆಡುವುದಿಲ್ಲ ಎಂದಿದ್ದಾರೆ.