ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬಹುತೇಕ ಎಲ್ಲ ಅಭಿಮಾನಿಗಳನ್ನು ಆಘಾತಗೊಳಿಸುವ ಸಂಗತಿಯೊಂದನ್ನು ಮಾಜಿ ಆಲ್‌ರೌಂಡರ್ ಮೊಯಿನ್ ಅಲಿ ಹಂಚಿಕೊಂಡಿದ್ದಾರೆ. 2019 ರಲ್ಲಿ ವಿರಾಟ್ ಕೊಹ್ಲಿ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ಪಾರ್ಥಿವ್ ಪಟೇಲ್ ಅವರನ್ನು ನಾಯಕನನ್ನಾಗಿ ಮಾಡುವ ಸಾಧ್ಯತೆ ಇತ್ತು ಎಂದಿದ್ದಾರೆ. ಸ್ಪೋರ್ಟ್ಸ್ ತಕ್ ಜೊತೆ ಮಾತನಾಡಿದ ಮೊಯಿನ್, ಗ್ಯಾರಿ ಕರ್ಸ್ಟನ್ ಅವರ ತರಬೇತಿ ಅವಧಿಯಲ್ಲಿ ತಂಡದೊಳಗೆ ನಡೆದ ಚರ್ಚೆಗಳು ಪಾರ್ಥಿವ್ ಅವರನ್ನು ನಾಯಕನನ್ನಾಗಿ ಮಾಡಲು ಗಂಭೀರವಾಗಿ ಪರಿಗಣಿಸಿದ್ದವು ಎಂದು ಹೇಳಿದ್ದಾರೆ.
ಡೇನಿಯಲ್ ವೆಟ್ಟೋರಿ ನಂತರ 2013ರಲ್ಲಿ ಪೂರ್ಣಾವಧಿ ನಾಯಕರಾದ ಕೊಹ್ಲಿ, ಲೀಗ್‌ನ ಅತಿದೊಡ್ಡ ಬ್ಯಾಟಿಂಗ್ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ, ಅವರ ನಾಯಕತ್ವದ ಬಗ್ಗೆ ತೀವ್ರ ಟೀಕೆಗಳು ಎದುರಾಗಿದ್ದವು. 2016ರಲ್ಲಿ ಆರ್‌ಸಿಬಿಯನ್ನು ಫೈನಲ್‌ಗೆ ಕೊಂಡೊಯ್ದ ನಂತರ, ಫ್ರಾಂಚೈಸಿ ತೀವ್ರ ಕುಸಿತ ಕಂಡಿತು. 2017 ರಲ್ಲಿ ಎಂಟನೇ ಸ್ಥಾನ, 2018 ರಲ್ಲಿ ಆರನೇ ಸ್ಥಾನ ಮತ್ತು 2019 ರಲ್ಲಿ ಮತ್ತೆ ಕೊನೆಯ ಸ್ಥಾನದಲ್ಲಿ ಉಳಿಯಿತು. 2018 ರಿಂದ 2020 ರವರೆಗೆ ಆರ್‌ಸಿಬಿ ಪರ ಆಡಿದ್ದ ಮೊಯಿನ್, ಹೆಚ್ಚುತ್ತಿದ್ದ ಒತ್ತಡದ ನಡುವೆ ತಂಡದ ಆಡಳಿತ ಮಂಡಳಿಯು ನಾಯಕತ್ವ ಬದಲಾವಣೆಯನ್ನು ಪರಿಗಣಿಸಿತ್ತು ಎಂದು ಹೇಳಿದರು.
'ಹೌದು, ಅವರು ಹಾಗೆ ಮಾಡುತ್ತಿದ್ದರು ಎಂದು ನಾನು ಭಾವಿಸುತ್ತೇನೆ. ಗ್ಯಾರಿ ಕರ್ಸ್ಟನ್ ಇದ್ದ ಕೊನೆಯ ವರ್ಷದಲ್ಲಿ ಪಾರ್ಥಿವ್ ನಾಯಕನಾಗುವ ಸಾಧ್ಯತೆ ಇತ್ತು. ಅವರಿಗೆ ಅದ್ಭುತ ಕ್ರಿಕೆಟ್ ಮೆದುಳು ಇತ್ತು. ಆ ಸಮಯದಲ್ಲಿ ಅದೇ ಮಾತು ಕೇಳಿಬರುತ್ತಿತ್ತು. ಆದರೆ, ಅದು ಏಕೆ ಕಾರ್ಯರೂಪಕ್ಕೆ ಬರಲಿಲ್ಲ ಎಂದು ನನಗೆ ತಿಳಿದಿಲ್ಲ. ಆದರೆ, ಅವರನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು' ಎಂದರು.
ಈ ಚರ್ಚೆಯ ಹೊರತಾಗಿಯೂ, ಕೊಹ್ಲಿ ನಾಯಕತ್ವವನ್ನು ಉಳಿಸಿಕೊಂಡು 2021 ರವರೆಗೆ ತಂಡದ ಚುಕ್ಕಾಣಿ ಹಿಡಿದರು. ಅಂತಿಮವಾಗಿ ಸ್ವಯಂಪ್ರೇರಿತವಾಗಿ ನಾಯಕನ ಸ್ಥಾನದಿಂದ ಕೆಳಗಿಳಿದರು. ಇದರೊಂದಿಗೆ ಕೊಹ್ಲಿ ತಮ್ಮ ಅಂತರರಾಷ್ಟ್ರೀಯ ನಾಯಕತ್ವವನ್ನೂ ತ್ಯಜಿಸಿದರು. ಸೈಮನ್ ಕ್ಯಾಟಿಚ್ ಅವರ ಮಾರ್ಗದರ್ಶನದಲ್ಲಿ ಆರ್‌ಸಿಬಿ 2020ರಲ್ಲಿ ಪ್ಲೇಆಫ್ ತಲುಪಿದ ನಂತರದ ವರ್ಷಗಳಲ್ಲಿ ಬದಲಾವಣೆ ಕಂಡಿತು ಮತ್ತು ಕೊಹ್ಲಿ ವಿಶಿಷ್ಟ ಸ್ಥಿರತೆಯೊಂದಿಗೆ ರನ್‌ಗಳನ್ನು ಸಂಗ್ರಹಿಸುವುದನ್ನು ಮುಂದುವರೆಸಿದರು.
ಕೊಹ್ಲಿ ನಂತರ, ಫಾಫ್ ಡು ಪ್ಲೆಸಿಸ್ 2022ರಲ್ಲಿ ಅಧಿಕಾರ ವಹಿಸಿಕೊಂಡರು. ಆರ್‌ಸಿಬಿಯ ಬಹುನಿರೀಕ್ಷಿತ ಐಪಿಎಲ್ ವೈಭವಕ್ಕೆ ಅಡಿಪಾಯ ಹಾಕಿದರು. 2025 ರಲ್ಲಿ ಕೊಹ್ಲಿಯವರ ನಿಕಟ ಮಾರ್ಗದರ್ಶನದಲ್ಲಿ ರಜತ್ ಪಾಟಿದಾರ್ ಫ್ರಾಂಚೈಸಿಯನ್ನು ಮುನ್ನಡೆಸಿದರು ಮತ್ತು ತಂಡವು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕೊಹ್ಲಿ 15 ಪಂದ್ಯಗಳಲ್ಲಿ 657 ರನ್ ಗಳಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
2011 ರಿಂದ 2023ರವರೆಗೆ ವಿರಾಟ್ ಕೊಹ್ಲಿ 143 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರು. ಈ ಪೈಕಿ 66ರಲ್ಲಿ ಗೆಲುವು ಕಂಡು 40 ಪಂದ್ಯಗಳಲ್ಲಿ ಸೋಲು ಕಂಡಿತು. 3 ಪಂದ್ಯಗಳು ಡ್ರಾ ಆದವು.