ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಸೆಪ್ಟೆಂಬರ್‌ನಿಂದ ಪ್ರಾರಂಭವಾಗುವ 2025ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ನಿಗದಿತ ಪಂದ್ಯಕ್ಕೆ ನಾನು ವಿರುದ್ಧವಾಗಿದ್ದೇನೆ ಎಂದು ಮಂಗಳವಾರ ಹೇಳಿದ್ದಾರೆ. 2025ರ ಪುರುಷರ ಏಷ್ಯಾ ಕಪ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 9 ರಿಂದ 28 ರವರೆಗೆ ಆಯೋಜಿಸಲಾಗುವುದು ಮತ್ತು ಸೆಪ್ಟೆಂಬರ್ 14 ರಂದು ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ನಿಗದಿಪಡಿಸಲಾಗಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಘೋಷಿಸಿದೆ.
ಏಷ್ಯಾಕಪ್‌ನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ಒಮನ್‌ಗಳು ಎ ಗುಂಪಿನಲ್ಲಿ ಕಾಣಿಸಿಕೊಂಡರೆ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ಬಿ ಗುಂಪಿನಲ್ಲಿವೆ.
ಇಂತಹ ವಾತಾವರಣದಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಬಾರದು ಎಂದು ತಿವಾರಿ ಅಭಿಪ್ರಾಯಪಟ್ಟಿದ್ದಾರೆ.
'ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಾವು ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಹೇಗೆ ಯೋಚಿಸಬಹುದು? ಅದನ್ನು ಮತ್ತೊಮ್ಮೆ ಪರಿಗಣಿಸಬೇಕು ಮತ್ತು ಇಂತಹ ವಾತಾವರಣದಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಬಾರದು ಎಂದು ನಾನು ಭಾವಿಸುತ್ತೇನೆ' ಎಂದು ಅವರು ಎಎನ್‌ಐಗೆ ತಿಳಿಸಿದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಭಾರತದ ವಿರುದ್ಧ ಏನಾದರೂ ಮಾಡುವ ಧೈರ್ಯ ತೋರಿದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಲೋಕಸಭೆಯಲ್ಲಿ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
'ನಮ್ಮ ಪ್ರಧಾನಿ ಮೋದಿಯವರು ಆಪರೇಷನ್ ಸಿಂಧೂರ ಇನ್ನೂ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಹೀಗಿರುವಾಗ, ನಾವು ಪಾಕಿಸ್ತಾನದೊಂದಿಗೆ ಹೇಗೆ ಪಂದ್ಯವನ್ನು ಆಡಬಹುದು?' ಎಂದು ತಿವಾರಿ ಪ್ರಶ್ನಿಸಿದ್ದಾರೆ.
ಈಮಧ್ಯೆ, ಪಂದ್ಯಾವಳಿಯ ಆರಂಭಿಕ ಪಂದ್ಯವನ್ನು ಸೆಪ್ಟೆಂಬರ್ 9 ರಂದು ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ನಡುವೆ ನಡೆಯಲಿದೆ. ಭಾರತವು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. ಆದರೆ, ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಪಂದ್ಯವನ್ನು 14 ರಂದು ನಿಗದಿಪಡಿಸಲಾಗಿದೆ. ಭಾರತವು ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಒಮಾನ್ ವಿರುದ್ಧ ಸೆಪ್ಟೆಂಬರ್ 19 ರಂದು ಆಡಲಿದೆ.
ಗುಂಪು ಹಂತದ ನಂತರ, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಅರ್ಹತೆ ಪಡೆಯಲಿದ್ದು, ಸೂಪರ್ 4 ನಲ್ಲಿ ಆಡುತ್ತವೆ. ಫೈನಲ್ ಸೆಪ್ಟೆಂಬರ್ 28 ರಂದು ನಿಗದಿಯಾಗಿದೆ.