ಕೋಲ್ಕತ್ತಾ: ಪ್ರವಾಸಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿರುವಂತೆಯೇ ಉತ್ತಮ ಸ್ಪಿನ್ನರ್ ಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಲಾರ್ಡ್ಸ್ ಹಾಗೂ ಮ್ಯಾಂಚೆಸ್ಟರ್ ಟೆಸ್ಟ್ ನಲ್ಲಿ ಕುಲದೀಪ್ ಯಾದವ್ ಆಡಬೇಕಿತ್ತು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಒಂದೇ ಒಂದು ಪಂದ್ಯವನ್ನು ಆಡಿಲ್ಲ.
ಮ್ಯಾಂಚೆಸ್ಟರ್, ಲಾರ್ಡ್ಸ್ ಅಲ್ಲದೇ ಬರ್ಮಿಂಗ್‌ಹ್ಯಾಮ್‌ನಲ್ಲಿಯೂ ಕುಲದೀಪ್ ಯಾದವ್ ಆಡಬೇಕಿತ್ತು. ಏಕೆಂದರೆ, ಉತ್ತಮ ಸ್ಪಿನ್ನರ್ ಇಲ್ಲದೆ ಟೆಸ್ಟ್‌ನ ನಾಲ್ಕು ಮತ್ತು ಐದನೇ ದಿನದಲ್ಲಿ ತಂಡಗಳನ್ನು ಔಟ್ ಮಾಡುವುದು ಕಷ್ಟವಾಗುತ್ತದೆ ಎಂದು ಗಂಗೂಲಿ ಸುದ್ದಿಗಾರರಿಗೆ ತಿಳಿಸಿದರು.
ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತದ ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಇಂಗ್ಲೆಂಡ್ ಬೌಲರ್‌ಗಳನ್ನು ನಿರಾಶೆಗೊಳಿಸಿದರು. ಐದನೇ ದಿನದ ಪಿಚ್‌ನಲ್ಲಿ ಡ್ರಾ ಮಾಡಿಕೊಳ್ಳಲು 143 ಓವರ್ ಆಡಿದರು ಎಂಬುದನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಗಂಗೂಲಿ, ಭಾರತವು ಸ್ವಲ್ಪ ಒರಟು ಮತ್ತು ತಿರುವು ಹೊಂದಿರುವ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಿದಾಗ ಇಂಗ್ಲೆಂಡ್‌ಗೆ ಏನಾಯಿತು ಎಂಬುದನ್ನು ನೋಡಿದ್ದಿರಿ. ಗುಣಮಟ್ಟದ ಸ್ಪಿನ್ನರ್ ಇರಲಿಲ್ಲ ಆದ್ದರಿಂದ ಇಂಗ್ಲೆಂಡ್ 20 ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದರು.
ಈ ಹಿಂದೆ ಅತ್ಯುತ್ತಮ ತಂಡಗಳಲ್ಲಿ ಶ್ರೇಷ್ಠ ಸ್ಪಿನ್ನರ್‌ಗಳಿದ್ದರು. ಶೇನ್ ವಾರ್ನ್, ಮುರಳಿ, ಇಂಗ್ಲೆಂಡ್‌ನ ಸ್ವಾನ್, ಪನೇಸರ್, ಭಾರತದ ಕುಂಬ್ಳೆ, ಹರ್ಭಜನ್, ಅಶ್ವಿನ್ ಮತ್ತಿತರ ಆಟಗಾರರಿದ್ದರು. ಹಾಗಾಗಿ ಕುಲದೀಪ್ ಯಾದವ್ ಭವಿಷ್ಯದಲ್ಲಿ ಭಾರತದ ಪರ ಟೆಸ್ಟ್ ನಲ್ಲಿ ಆಡುವುದನ್ನು ಮುಂದುವರೆಸಬೇಕು ಎಂದು ನಾನು ಬಯಸುತ್ತೇನೆ ಎಂದು ಹೇಳಿದರು.
ಆದಾಗ್ಯೂ, ಐದನೇ ಟೆಸ್ಟ್‌ಗೆ ಕುಲದೀಪ್ ಯಾದವ್ ಅವರನನು ಕೈಬಿಟ್ಟಿರುವುದು ಸರಿಯಾಗಿದೆ. ಏಕೆಂದರೆ ವೇಗಿಗಳಿಗೆ ಪಿಚ್ ನೆರವಾಗುವ ಸಾಧ್ಯತೆಯಿದ್ದು, ಭಾರತ ಅಂತಿಮ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸುವ ವಿಶ್ವಾಸವಿದೆ ಎಂದರು.