ಅಹಮದಾಬಾದ್: ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರು ರನ್ ಗಳಿಂದ ಆರ್ ಸಿಬಿ ಗೆಲುವು ಸಾಧಿಸಿದ ಬಳಿಕ ವಿರಾಟ್ ಕೊಹ್ಲಿಯ ಸಂಭ್ರಮ ಹೇಳ ತೀರದಾಗಿತ್ತು. 18 ವರ್ಷಗಳ ಕನಸು ನನಸಾದ ಖುಷಿಯಲ್ಲಿ ಮೈದಾನದಲ್ಲಿ ಭಾವುಕರಾದ ವಿರಾಟ್ ಕೊಹ್ಲಿ, ಮಗುವಿನಂತೆ ಕಣ್ಣೀರಿಟ್ಟರು.
ತದನಂತರ ಕಣ್ಣೀರು, ನಗು ಹಾಗೂ ಹಾಸ್ಯದೊಂದಿಗೆ ಸಂಭ್ರಮಿಸಿದರು. ಮಗುವಿನಂತೆ ಬಂದು ಟೀಂ ಇಂಡಿಯಾ ಮಾಜಿ ತರಬೇತುದಾರ ರವಿಶಾಸ್ತ್ರಿ ಅವರನ್ನು ಅಪ್ಪಿಕೊಂಡ ಕ್ಷಣ ನಿಜಕ್ಕೂ ಅದ್ಬುತವಾಗಿತ್ತು.
RCB ಯ ಅವಿಸ್ಮರಣೀಯ ಗೆಲುವಿಗಾಗಿ ವಿರಾಟ್ ಕೊಹ್ಲಿಯನ್ನು ರವಿಶಾಸ್ತ್ರಿ ಅಭಿನಂದಿಸಿದರು. ಈ ಕ್ಷಣವನ್ನು ನೋಡಿದ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಚಪ್ಪಾಳೆ ತಟ್ಟಿ ಮನಸೋ ಇಚ್ಛೆ ನಕ್ಕಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ವಿಡಿಯೋವನ್ನು ಹೆಚ್ಚೆಚ್ಚು ಶೇರ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಭಾರತ ಕ್ರಿಕೆಟ್‌ನ ಯಶಸ್ಸಿಗೆ ಕೊಹ್ಲಿ ಮತ್ತು ಶಾಸ್ತ್ರಿ ಜೋಡಿ ಅಪಾರ ಕೊಡುಗೆ ನೀಡಿದೆ. ಶಾಸ್ತ್ರಿ ಮುಖ್ಯ ಕೋಚ್ ಆಗಿದ್ದ ಅವಧಿಯಲ್ಲಿ ಕೊಹ್ಲಿ ಟೀಂ ಇಂಡಿಯಾ ನಾಯಕರಾಗಿದ್ದರು. 2021 ರಲ್ಲಿ ಯುಎಇಯಲ್ಲಿ ನಡೆದ ಟಿ 20 ವಿಶ್ವಕಪ್ ನಂತರ ಅವರು ಕೋಚ್ ಹುದ್ದೆಯಿಂದ ನಿರ್ಗಮಿಸಿದ್ದರು.