ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಆ್ಯಂಡರ್ಸನ್ - ತೆಂಡೊಲ್ಕರ್ ಹೊಸ ಟ್ರೋಫಿಯನ್ನು ಕ್ರಿಕೆಟ್ ಜಗತ್ತಿನ ಇಬ್ಬರು ದಿಗ್ಗಜ ಆಟಗಾರರು ಅನಾವರಣಗೊಳಿಸಿದರು. ಟ್ರೋಫಿಯು ತೆಂಡೂಲ್ಕರ್ ಅವರ ಐಕಾನಿಕ್ ಕವರ್ ಡ್ರೈವ್ ಮತ್ತು ಆಂಡರ್ಸನ್ ಅವರ ಸಿಗ್ನೇಚರ್ ಬೌಲಿಂಗ್ ಆಕ್ಷನ್ ಮತ್ತು ಇಬ್ಬರ ಕೆತ್ತಿದ ಸಹಿಗಳ ಚಿತ್ರಣವನ್ನು ಒಳಗೊಂಡಿದೆ.
ಪಟೌಡಿ ಟ್ರೋಫಿಯನ್ನು ಇದೀಗ ಆ್ಯಂಡರ್ಸನ್- ತೆಂಡೊಲ್ಕರ್ ಟ್ರೋಫಿ ಎಂದು ಮರು ನಾಮಕರಣ ಮಾಡಲಾಗಿದೆ. ಟೆಸ್ಟ್ ಸರಣಿ ಗೆದ್ದ ತಂಡಕ್ಕೆ ಈ ಟ್ರೋಫಿಯನ್ನು ವಿತರಿಸಲಾಗುತ್ತದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ನಾಳೆಯಿಂದ ಆರಂಭವಾಗಲಿದೆ.
ಸಚಿನ್ ಹಾಗೂ ಆ್ಯಂಡರ್ಸನ್ ಗೌರವಾರ್ಥವಾಗಿ ಇಂಗ್ಲೆಂಡ್ ಹಾಗೂ ವೇಲ್ ಕ್ರಿಕೆಟ್ ಮಂಡಳಿ, ಬಿಸಿಸಿಐ ಜಂಟಿಯಾಗಿ ಹೆಸರು ಬದಲಾಯಿಸಲಾಗಿದೆ ಎಂದು ಉಭಯ ಕ್ರಿಕೆಟ್ ಮಂಡಳಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಟ್ರೋಫಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಸಚಿನ್ ತೆಂಡೊಲ್ಕರ್, ಆ್ಯಂಡರ್ಸನ್ ಅವರೊಂದಿಗೆ ಗುರುತಿಸುತ್ತಿರುವುದು ಒಂದು ಅತ್ಯುನ್ನತ ಗೌರವವಾಗಿದೆ ಎಂದು ಹೇಳಿದರು. ನನಗೆ, ಟೆಸ್ಟ್ ಕ್ರಿಕೆಟ್ ಜೀವನವನ್ನು ಸಾಕಾರಗೊಳಿಸಿದೆ. ಒಂದು ವೇಳೆ ಏನಾದರೂ ತಪ್ಪಾಗಿದ್ದರೆ ಯೋಚಿಸಲು, ಕಲಿಯಲು ಮತ್ತು ಪುಟಿದೇಳಲು ಇನ್ನೊಂದು ದಿನವನ್ನು ನೀಡುತ್ತದೆ. ಇದು ಸಹಿಷ್ಣುತೆ, ಶಿಸ್ತು ಮತ್ತು ಹೊಂದಾಣಿಕೆಯನ್ನು ಕಲಿಸುವ ಆಟದ ಅತ್ಯುನ್ನತ ರೂಪವಾಗಿದೆ. ಹಲವು ಪೀಳಿಗೆಗಳಿಗೆ ಸ್ಫೂರ್ತಿದಾಯಕ ರೀತಿಯಲ್ಲಿ ಟೆಸ್ಟ್ ಕ್ರಿಕೆಟ್ ಅನ್ನು ರೂಪಿಸುವಲ್ಲಿ ಭಾರತ ಮತ್ತು ಇಂಗ್ಲೆಂಡ್ ದೊಡ್ಡ ಪಾತ್ರವನ್ನು ವಹಿಸಿವೆ ಎಂದು ತಿಳಿಸಿದರು.
ಜೇಮ್ಸ್ ಆ್ಯಂಡರ್ಸನ್ ಮಾತನಾಡಿ, ಈ ಪ್ರತಿಷ್ಠಿತ ಸರಣಿಗೆ ಸಚಿನ್ ಹಾಗೂ ನನ್ನ ಹೆಸರಿಡಲಾಗಿರುವುದರಿಂದ ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಎರಡು ದೇಶಗಳ ನಡುವಿನ ಪೈಪೋಟಿ ಯಾವಾಗಲೂ ವಿಶೇಷವಾದದ್ದು, ಇದು ಮರೆಯಲಾಗದ ಕ್ಷಣಗಳಿಂದ ತುಂಬಿದೆ ಎಂದರು.
ಆ್ಯಂಡರ್ಸನ್ ಭಾರತದ ವಿರುದ್ಧ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 39 ಪಂದ್ಯಗಳಲ್ಲಿ, 25.47 ಸರಾಸರಿಯಲ್ಲಿ 149 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ 32 ಟೆಸ್ಟ್ ಆಡಿರುವ ತೆಂಡೂಲ್ಕರ್ 2002 ರಲ್ಲಿ ಹೆಡಿಂಗ್ಲೆಯಲ್ಲಿ 193 ರನ್ ಸೇರಿದಂತೆ 51.73 ಸರಾಸರಿಯಲ್ಲಿ 2,535 ರನ್ ಗಳಿಸಿದ್ದಾರೆ.