ಐಪಿಎಲ್ 2025ರ ಕಪ್ ಗೆದ್ದ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (IPL) ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಎಂ ಚಿನ್ಸಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದ ನಂತರ, ಬಿಸಿಸಿಐ ನಿರ್ಣಾಯಕ ಕ್ರಮ ಕೈಗೊಳ್ಳುತ್ತಿದೆ. ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾಗಿ, 50ಕ್ಕೂ ಹೆಚ್ಚು ಅಭಿಮಾನಿಗಳು ಗಾಯಗೊಂಡಿದ್ದರು. ಮುಂದಿನ ಯಾವುದೇ ಐಪಿಎಲ್ ಆಚರಣೆಗಳು ಕಠಿಣ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರದೆ ನಡೆಯುವುದಿಲ್ಲ ಎಂದು ಮಂಡಳಿ ದೃಢಪಡಿಸಿದೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಐಪಿಎಲ್ ಗೆಲುವಿನ ನಂತರದ ಸಾರ್ವಜನಿಕ ಆಚರಣೆಗಳು ಯಾವುದೇ ಜೀವಗಳನ್ನು ಬಲಿತೆಗೆದುಕೊಳ್ಳಬಾರದು. ಆರ್‌ಸಿಬಿ ಮತ್ತು ಕರ್ನಾಟಕ ಸರ್ಕಾರ ಸ್ವತಂತ್ರವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಿಂದ ಬಿಸಿಸಿಐ ಆರಂಭದಲ್ಲಿ ದೂರವಿದ್ದರೂ, ಈಗ ಮಂಡಳಿಯು ಅಂತಹ ಆಚರಣೆಗಳನ್ನು ನಿಯಂತ್ರಿಸಲು ಮುಂದಾಗಿದೆ ಎಂದರು.
ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು, ಸುರಕ್ಷಿತವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದ್ದು, ಪ್ರಮಾಣೀಕೃತ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ರೂಪಿಸಲೆಂದು ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಮಾರ್ಗಸೂಚಿಗಳು ಇನ್ನು ಮುಂದೆ ಎಲ್ಲ ಐಪಿಎಲ್ ತಂಡಗಳಿಗೆ ಕಡ್ಡಾಯವಾಗಿರುತ್ತವೆ.
ಬಿಸಿಸಿಐ ಪ್ರಸ್ತಾಪಿಸಿರುವ ಪ್ರಮುಖ ಮಾರ್ಗಸೂಚಿಗಳು
* ಕೂಲಿಂಗ್-ಆಫ್ ಅವಧಿ: ಪ್ರಶಸ್ತಿ ಗೆದ್ದ 3-4 ದಿನಗಳ ಒಳಗೆ ಯಾವುದೇ ತಂಡಕ್ಕೆ ಆಚರಣೆಗಳನ್ನು ನಡೆಸಲು ಅವಕಾಶವಿರುವುದಿಲ್ಲ.
* ಆತುರದ ಮತ್ತು ಕಳಪೆ ನಿರ್ವಹಣೆಯ ಕಾರ್ಯಕ್ರಮಗಳನ್ನು ತಪ್ಪಿಸಲು ಕಡಿಮೆ ಸಮಯ ಇರುವಾಗ ನಿಗದಿಪಡಿಸಲು ಅಥವಾ ಯೋಜಿಸಲು ಅನುಮತಿಸಲಾಗುವುದಿಲ್ಲ.
* ಕಡ್ಡಾಯ ಬಿಸಿಸಿಐ ಅನುಮತಿ: ತಂಡಗಳು ಯಾವುದೇ ಆಚರಣೆಯನ್ನು ಆಯೋಜಿಸುವ ಮೊದಲು ಬಿಸಿಸಿಐನಿಂದ ಔಪಚಾರಿಕ ಅನುಮತಿಯನ್ನು ಪಡೆಯಬೇಕು.
* ಮಂಡಳಿಯಿಂದ ಲಿಖಿತ ಪೂರ್ವಾನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.
* ಭದ್ರತಾ ನೀಲನಕ್ಷೆ: ಕಡ್ಡಾಯ 4 ರಿಂದ 5 ಹಂತದ ಭದ್ರತಾ ಪ್ರೋಟೋಕಾಲ್‌ಗಳನ್ನು ಕೈಗೊಳ್ಳಬೇಕು.
* ಎಲ್ಲ ಸ್ಥಳಗಳಲ್ಲಿ ಮತ್ತು ಆಟಗಾರರ ಪ್ರಯಾಣದ ವೇಳೆ ಬಹು-ಪದರದ ಭದ್ರತಾ ಉಪಸ್ಥಿತಿಯು ಅತ್ಯಗತ್ಯ.
* ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಂಡವು ಬರುವಾಗ ಭದ್ರತಾ ವ್ಯವಸ್ಥೆಗಳು ಇರಬೇಕು.
* ಕಾರ್ಯಕ್ರಮದ ವೇಳಾಪಟ್ಟಿಯ ಉದ್ದಕ್ಕೂ ಆಟಗಾರರು ಮತ್ತು ಸಿಬ್ಬಂದಿಗೆ ಸಂಪೂರ್ಣ ರಕ್ಷಣೆ ಒದಗಿಸುವುದು.
* ಸರ್ಕಾರದ ಅನುಮತಿಗಳು: ಜಿಲ್ಲಾ ಪೊಲೀಸ್, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು.
* ಕಾನೂನುಬದ್ಧವಾಗಿ ಮತ್ತು ಸುರಕ್ಷಿತವಾಗಿ ಮುಂದುವರಿಯಲು ಎಲ್ಲ ಆಚರಣೆಗಳು ನಾಗರಿಕ ಮತ್ತು ಕಾನೂನು ಜಾರಿ ಸಂಸ್ಥೆಗಳಿಂದ ಹಸಿರು ನಿಶಾನೆ ತೋರಬೇಕು.
18 ವರ್ಷಗಳ ಬಳಿಕ ಆರ್‌ಸಿಬಿ ತಂಡವು ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಒಂದು ದಿನದ ನಂತರ ಜೂನ್ 4 ರಂದು ಬೆಂಗಳೂರಿನಲ್ಲಿ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿತ್ತು. ಸಂಚಾರ ಪೊಲೀಸರ ಎಚ್ಚರಿಕೆಗಳ ಹೊರತಾಗಿಯೂ, ಈ ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಜಮಾಯಿಸಿದ್ದರಿಂದ ಕಾಲ್ತುಳಿತ ಉಂಟಾಯಿತು.