ಲೀಡ್ಸ್: ಲೀಡ್ಸ್ ನಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳ ಅಂತರದಿಂದ ಇಂಗ್ಲೆಂಡ್ ಗೆಲುವು ಸಾಧಿಸಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.
ಐದನೇ ದಿನ 371 ರನ್ ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ಬೆನ್ ಡಕೆಟ್ ಅವರ ಭರ್ಜರಿ 149 ರನ್ ಗಳ ನೆರವಿನಿಂದ ಐದು ವಿಕೆಟ್ ಗಳಿಂದ ರೋಚಕ ಗೆಲುವಿನ ನಗೆ ಬೀರಿತು.
148 ವರ್ಷಗಳಲ್ಲಿ ಇದೇ ಮೊದಲು: 148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಟೆಸ್ಟ್ ಪಂದ್ಯದಲ್ಲಿ ಭಾರತ ಐದು ಶತಕಗಳನ್ನು ಗಳಿಸಿಯೂ ಸೋಲಿಗೆ ಒಳಗಾದ ತಂಡವೆನಿಸಿತು.
ಮೊದಲ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ (101) ಶುಭಮನ್ ಗಿಲ್ (147) ರಿಷಭ್ ಪಂತ್ (134) ರನ್ ಗಳಿಸಿದ್ದರೆ ಎರಡನೇ ಇನ್ಸಿಂಗ್ ನಲ್ಲಿ ಪಂತ್ (118) ಮತ್ತು ಕೆಎಲ್ ರಾಹುಲ್ (137) ಶತಕ ದಾಖಲಿಸಿದ್ದರು. ಆದರೆ ಅದು ವ್ಯರ್ಥವಾಯಿತು.
ಮೊದಲ ಇನ್ನಿಂಗ್ಸ್ ನಲ್ಲಿ ಕೊನೆಯ ಏಳು ವಿಕೆಟ್ ಗಳಲ್ಲಿ ಕೇವಲ 41 ರನ್ ಅಂತರದಲ್ಲಿ ಕಳೆದುಕೊಂಡಿದ್ದ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 31 ರನ್ ಅಂತರದಲ್ಲಿ ಅಂತಿಮದ ಆರು ವಿಕೆಟ್ ಕಳೆದುಕೊಂಡಿತು. ಇದು ಸೋಲಿಗೆ ಪ್ರಮುಖ ಕಾರಣವಾಯಿತು. ಕೈಚೆಲ್ಲಿದ ಹಲವು ಕ್ಯಾಚ್ ಗಳಿಂದಲೂ ಹಿನ್ನಡೆ ಆಯಿತು.
ಒಟ್ಟಾರೇ ಭಾರತದ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಗೆ ಅದೃಷ್ಟ ಕೈಕೊಟ್ಟಿದ್ದು, ಸೋಲಿನೊಂದಿಗೆ ತಮ್ಮ ಅಭಿಯಾನ ಆರಂಭಿಸಿದರು.